ಕಲಬುರಗಿ: ಕಲಬುರಗಿ ನಗರದಲ್ಲಿ ನಾಳೆಯಿಂದ ಆಗಸ್ಟ್ 15ರವರೆಗೆ ಮೂರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಜಲಮೂಲಗಳಲ್ಲಿ ಒಂದಾದ ಭೀಮಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸರಡಗಿ ಪಂಪ್ಹೌಸ್ನಲ್ಲಿರುವ ಮೋಟಾರ್ಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಸುವ ಕೋಟನೂರು (ಡಿ) ಹಾಗೂ ಶೋರಗುಂಬಜ್ ಜಲಶುದ್ಧೀಕರಣ ಕೇಂದ್ರಗಳಿಂದ ನೀರು ಸರಬರಾಜಾಗುವ ಬಡಾವಣೆಗಳಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯೂಎಸ್ಎಂಪಿ-ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಹಾನಗರಪಾಲಿಕೆ, ಕೆಯುಡಬ್ಲ್ಯೂಎಸ್ಎಂಪಿ-ಕೆಯುಐಡಿಎಫ್ಸಿ ಹಾಗೂ ಎಲ್&ಟಿ ಸಂಸ್ಥೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಯಾವೆಲ್ಲ ಪ್ರದೇಶಗಳಲ್ಲಿ ನೀರಿನ ವ್ಯತ್ಯಯ?
ನಗರದ ಬಿದ್ದಾಪೂರ, ರಾಯರಗುಡ್ಡಿ, ವಿಶಾಲ ನಗರ, ಅಂಬಿಕಾ ನಗರ, ಪಿಂಪ್ಲಿ ಟೆಂಪಲ್, ಪಿ & ಟಿ ಕಾಲೋನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ್ ನಗರ, ಬನಶಂಕರಿ ನಗರ, ಹರಿ ನಗರ ಹಾಗೂ ಗಾಬರೆ ಲೇಔಟ್ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.
ಇದರ ಜೊತೆಗೆ ಜೆಮಶೆಟ್ಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್ಜಿಒ ಕಾಲೋನಿ, ಜೇವರ್ಗಿ ಕಾಲೋನಿ, ಮಾಕಾ ಲೇಔಟ್, ಸಂತೋಷ ಕಾಲೋನಿ, ಪಿಡಬ್ಲ್ಯೂಡಿ ಕಾಲೋನಿ, ಬ್ಯಾಂಕ್ ಕಾಲೋನಿ, ಬಾಲಾಜಿ ನಗರ, ರೆಹಮತ್ ನಗರ, ಸಂಪಿಗೆ ನಗರ ಹಾಗೂ ಬುದ್ಧ ನಗರ ಪ್ರದೇಶಗಳಲ್ಲೂ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ರೇವಣಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಓಜಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೋನಿ, ಸಿಐಬಿ ಕಾಲೋನಿ, ಶಕ್ತಿ ನಗರ, ಸ್ಟೇಷನ್ ಬಜಾರ್, ಐವಾನ್ ಶಾಹಿ, ಯತ್ತೀಮ್ಖಾನಾ, ಶಾಂತಿ ನಗರ, ವಿಠ್ಠಲ ನಗರ ಹಾಗೂ ಖುಬಾ ಪ್ಲಾಟ್ ಪ್ರದೇಶಗಳಿಗೂ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ.
ಅದೇ ರೀತಿ ಮಿಜಬಾ ನಗರ, ಅಜಮಿರ್ ಕಾಲೋನಿ, ಕರೀಂನಗರ, ಗಾಲಿಫ್ ಕಾಲೋನಿ, ಮಹಮ್ಮದ್ ಚೌಕ್, ಖಾದಿಲ್ ಚೌಕ್, ಶಿವನಗರ, ಸಿದ್ರಾಮೇಶ್ವರ ಕಾಲೋನಿ, ನಬಿ ಕಾಲೋನಿ, ಶೇಖ್ ರೋಜಾ ಹಾಗೂ ಕೈಲಾಸ ನಗರ ಪ್ರದೇಶಗಳಲ್ಲೂ ನೀರಿನ ವ್ಯತ್ಯಯ ಉಂಟಾಗಲಿದೆ.
ಇನ್ನು ಜಿ.ಆರ್. ನಗರ, ಕಸ್ತೂರಿ ನಗರ, ಆಶ್ರಯ ಕಾಲೋನಿ, ಪೂಜಾ ಕಾಲೋನಿ, ಜಾಗೃತಿ ಕಾಲೋನಿ, ಓಂ ನಗರ, ಜಂ ಜಂ ಕಾಲೋನಿ, ಜುಬೇರ್ ಕಾಲೋನಿ, ಆಜಾದಪುರ ಕಾಲೋನಿ, ನಾಯ್ಡು ಕಾಲೋನಿ ಹಾಗೂ ಮಿನಿ ಅಮ್ಮಲವಾಡಿ ಪ್ರದೇಶಗಳಲ್ಲಿಯೂ ನಾಳೆಯಿಂದ ಮೂರು ದಿನಗಳ ಕಾಲ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ಭೀಮಾ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪಂಪ್ಹೌಸ್ನ ಮೋಟಾರ್ಗಳನ್ನು ಸ್ಥಗಿತಗೊಳಿಸಿರುವುದೇ ನೀರು ಸರಬರಾಜಿನ ವ್ಯತ್ಯಯಕ್ಕೆ ಕಾರಣವಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ನೀರು ಪೂರೈಕೆ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆಯಿಂದ ಮೂರು ದಿನಗಳ ಕಾಲ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



