ದಾವಣಗೆರೆ: ಕೇರಳ ಸರ್ಕಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮದು ಶಾಂತಿಯುತ ರಾಜ್ಯ. ಕೇರಳ ಸರ್ಕಾರದವರಿಂದ ಬುದ್ಧಿ ಹೇಳಿಸಿಕೊಂಡು ನಮ್ಮ ಜನರಿಗೆ ಏನು ಮಾಡಬೇಕು ಎಂಬ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಕೋಗಿಲು ಬಡಾವಣೆ ನಿವಾಸಿಗಳ ಒತ್ತುವರಿ ತೆರವು ವಿಚಾರ ಕುರಿತು ಮಾತನಾಡಿದ ಅವರು, ಕೇರಳ ಸರ್ಕಾರಕ್ಕೆ ತಾವೇ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳಿವೆ. ಕಾಂಗ್ರೆಸ್ ಸರ್ಕಾರ ಅಲ್ಲಿನ ಬಡವರಿಗೆ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿಕೊಂಡು ಸಮಸ್ಯೆ ಎದುರಿಸುತ್ತಿದೆ ಎಂದು ಟೀಕಿಸಿದರು.
ಇಡೀ ದೇಶದ ಜನರನ್ನು ನಮ್ಮವರು ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕನ್ನಡಿಗರಿಗೆ ಕೇರಳದವರಿಂದ ಪಾಠ ಕಲಿತುಕೊಳ್ಳುವ ಅಗತ್ಯವಿಲ್ಲ. ನಮ್ಮ ಜನರಿಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ಕೆ.ಸಿ. ವೇಣುಗೋಪಾಲ್ ಅವರು ಅಲ್ಲಿನ ಸಮಸ್ಯೆಯನ್ನು ನೋಡಿ ಸಹಾಯ ಮಾಡುವಂತೆ ಮಾತ್ರ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅವರು ರಾಜಕೀಯ ಮಾಡಲು ಬಂದಿಲ್ಲ. ಆದರೆ ಈ ವಿಷಯದಲ್ಲಿ ಕೇರಳದ ಮುಖ್ಯಮಂತ್ರಿ ರಾಜಕೀಯ ಮಾಡಿದ್ದಾರೆ ಎಂದು ಸಚಿವರು ಆರೋಪಿಸಿದರು.
ವೇಣುಗೋಪಾಲ್ ಅವರು ಪಕ್ಷಾತೀತವಾಗಿ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದಲೇ ಹೇಳಿಕೆ ನೀಡಿದ್ದಾರೆ ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.



