ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ ಹಾಗೂ ‘ಗಿಚ್ಚಿ ಗಿಲಿಗಿಲಿ’ ಸ್ಟಾರ್ ಪ್ರಶಾಂತ್ ಗೌಡ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಭಾನುವಾರ (ಜುಲೈ 5) ನಡೆದ ಅದ್ದೂರಿ ಸಮಾರಂಭದಲ್ಲಿ ನಟಿ ಕೃತಿ ಗೌಡ ಅವರನ್ನು ವರಿಸಿ ಹೊಸ ಬದುಕಿನ ಪಯಣ ಆರಂಭಿಸಿದ್ದಾರೆ.
ಮದುವೆ ಸಮಾರಂಭದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಿರುತೆರೆ ಮತ್ತು ಚಿತ್ರರಂಗದ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವದಂಪತಿಯನ್ನು ಆಶೀರ್ವದಿಸಿದರು.
ಪ್ರಶಾಂತ್ ಗೌಡ ಅವರ ಪತ್ನಿ ಕೃತಿ ಗೌಡ ಕೂಡ ಕಲಾರಂಗದವರೇ ಆಗಿದ್ದು, ‘ಬ್ರೇಕ್ ಫೇಲ್ಯೂರ್’ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ಪರಿಚಯದಿಂದ ಆರಂಭವಾದ ಇವರ ಸ್ನೇಹ, ಬಳಿಕ ಪ್ರೀತಿಗೆ ತಿರುಗಿ ಈಗ ವಿವಾಹ ಬಂಧನದಲ್ಲಿ ಒಂದಾಗಿದೆ.
‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದ ಸಹ ಕಲಾವಿದರು ಹಾಗೂ ಆಪ್ತರು ಮದುವೆಯಲ್ಲಿ ಭಾಗವಹಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಹಾಡು, ನೃತ್ಯ ಹಾಗೂ ಸಂಭ್ರಮದ ಕ್ಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ಅದ್ಭುತ ಕಾಮಿಡಿ ಟೈಮಿಂಗ್ ಮೂಲಕ ಕನ್ನಡಿಗರ ಮನೆಮಾತಾಗಿರುವ ಪ್ರಶಾಂತ್ ಗೌಡ ಅವರ ಹೊಸ ಜೀವನ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.



