ಬೆಳಗಾವಿ: ವಿಜಯದಶಮಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ದುರಂತ ಸಂಭವಿಸಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಬೆಳಗಾವಿ ನಗರದ ಮುರಳೀಧರ್ ಕಾಲೋನಿಯಲ್ಲಿ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಅಶ್ವಿನಿ ವಿಠ್ಠಲ ಹೆಗಡೆ (23) ಎಂದು ಗುರುತಿಸಲಾಗಿದೆ. ಅವರ ಪತಿ ವಿಠ್ಠಲ ರುದ್ರಪ್ಪ ಹೆಗಡೆ (33) ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ಪರಾರಿಯಾಗಿದ್ದ ಆತನನ್ನು ಎಪಿಎಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯಪಾನ ವಿಚಾರವಾಗಿ ಆಗಾಗ ಜಗಳ:
ವಿಠ್ಠಲ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅಶ್ವಿನಿಗೆ ಪರಿಚಿತ ವ್ಯಕ್ತಿಯೊಬ್ಬರೊಂದಿಗಿದ್ದ ಸಲುಗೆಯೂ ದಂಪತಿ ನಡುವಿನ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಕುಟುಂಬದಲ್ಲಿ ಜಗಳವಾದಾಗ ಹಿರಿಯರು ಮಧ್ಯಪ್ರವೇಶಿಸಿ ಇಬ್ಬರಿಗೂ ಬುದ್ಧಿವಾದ ಹೇಳುತ್ತಿದ್ದರು.
ತಂದೆಗೆ ಊಟ ಮಾಡಿಸುತ್ತಿದ್ದಾಗ ದಾಳಿ:
ವಿಜಯದಶಮಿ ದಿನವೂ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ವಿಠ್ಠಲನ ತಂದೆ ರುದ್ರಪ್ಪ ಅವರಿಗೆ ಅಶ್ವಿನಿ ಊಟ ಮಾಡಿಸುತ್ತಿದ್ದ ವೇಳೆ ವಿಠ್ಠಲ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದಂಪತಿಗೆ ಇಬ್ಬರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಹಬ್ಬದ ದಿನವೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.










