ನಟ ಜಯಂ ರವಿ ತಮ್ಮ ವಿಚ್ಛೇದನ ವಿವಾದದ ನಡುವೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಪತ್ನಿ ಆರತಿಯಿಂದ ಪ್ರತ್ಯೇಕವಾಗಿರುವ ಅವರು, ವಿಚ್ಛೇದನ ಪ್ರಕರಣ ಮುಗಿಯುವವರೆಗೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ, ತಮ್ಮ ಕುಟುಂಬ ಜೀವನದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದು, ಪತ್ನಿ ಹಾಗೂ ಆನ್‌ಲೈನ್ ಟ್ರೋಲಿಗರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನನ್ನ ಜೀವನದಲ್ಲಿ ನಡೆದಿರುವುದನ್ನು ಸರಿಪಡಿಸಿಕೊಳ್ಳುವವರೆಗೆ ನಾನು ಕ್ಯಾಮೆರಾ ಮುಂದೆ ನಿಲ್ಲುವುದಿಲ್ಲ. ಸಾಕಷ್ಟು ವರ್ಷ ಮೌನವಾಗಿದ್ದೆ. ಆದರೆ ಈಗ ಎಲ್ಲಾ ಸತ್ಯಗಳನ್ನು ಹೊರಗೆ ತರುವ ಸಮಯ ಬಂದಿದೆ’ ಎಂದು ರವಿ ಹೇಳಿದ್ದಾರೆ.
ತಮ್ಮ ಮಕ್ಕಳ ವಿಚಾರದಲ್ಲಿ ಭಾವುಕರಾದ ಅವರು, ‘ಮಕ್ಕಳ ಫೀಸ್‌ಗೆ 90 ಲಕ್ಷ ರೂ. ಕಟ್ಟುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ನನಗೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ? ಈಗ ನನ್ನ ಮಕ್ಕಳನ್ನೇ ನೋಡಲು ಅವಕಾಶ ನೀಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಜೊತೆ ಕಳುಹಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ರವಿ, ‘ನಾನು ಇದ್ದಾಗ ನನ್ನನ್ನು ಗುಲಾಮನಂತೆ ನಡೆಸಿಕೊಂಡರು. ಈಗ ನನ್ನ ಬಗ್ಗೆ ಮಾತನಾಡುತ್ತಿರುವ ರೀತಿಯೇ ನನಗೆ ದೊಡ್ಡ ನೋವು ಕೊಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಯಕಿ ಕೆನೀಶಾ ಫ್ರಾನ್ಸಿಸ್ ಜೊತೆಗಿನ ಆಪ್ತತೆಯ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ, ಕೆನೀಶಾ ‘ವಿದಾಯ ಚೆನ್ನೈ’ ಪೋಸ್ಟ್ ಹಂಚಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಜಯಂ ರವಿ ನಡೆಸಿದ ಸುದ್ದಿಗೋಷ್ಠಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.



