Homesocial avarenessತಂಬಾಕು ತ್ಯಜಿಸಿ ಸಂತೃಪ್ತ ಜೀವನ ನಡೆಸೋಣ

ತಂಬಾಕು ತ್ಯಜಿಸಿ ಸಂತೃಪ್ತ ಜೀವನ ನಡೆಸೋಣ

Spread the love

ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 31ರಂದು ಸಾರ್ವಜನಿಕರಲ್ಲಿ ತಂಬಾಕು ಸೇವನೆಯಿಂದಾಗುವ ಅಪಾಯಗಳು ಹಾಗೂ ಅವುಗಳನ್ನು ತಡೆಗಟ್ಟುವ ಕ್ರಮದ ಬಗ್ಗೆ ಗಮನ ಸೆಳೆಯಲು ಎಲ್ಲಾ ರಾಷ್ಟ್ರಗಳಿಂದ `ವಿಶ್ವ ತಂಬಾಕು ರಹಿತ ದಿನ’ವನ್ನು ಆಚರಿಸಲಾಗುತ್ತದೆ. ಇದು ಕೇವಲ ಆಚರಣೆಯಾಗದೇ ತಂಬಾಕಿನಿಂದಾದ ಯಾವದೇ ಉತ್ಪನ್ನಗಳನ್ನು ಬಳಸದೇ ಆರೋಗ್ಯ, ಕ್ಷೇಮ ಹಾಗೂ ಚೈತನ್ಯಯುತವಾದ ಜೀವನ ನಡೆಸುವಂತೆ ಪ್ರೋತ್ಸಾಹಿಸಲು ಮತ್ತು ಯಾವುದೇ ರೀತಿಯ ಧೂಮಪಾನಿಗಳಿದ್ದರೆ ಅವರನ್ನು ವ್ಯಸನ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.

2024ರ ವಿಶ್ವತಂಬಾಕುರಹಿತ ದಿನದ ಥೀಮ್ `ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು’ ಎಂದಾಗಿದೆ. ಏಕೆಂದರೆ ಇಂದಿನ ದಿನಗಳಲ್ಲಿ ಮಕ್ಕಳೇ ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ಕಾರಣ ಸಮಾಜಿಕ ಜಾಲತಾಣಗಳು. ತಂಬಾಕು ಉತ್ಪನ್ನಗಳನ್ನು ಮಾರುವುದಕ್ಕಾಗಿ ಅತೀ ಆಕರ್ಷಣೀಯವಾದ, ನೆಚ್ಚಿನ ನಟ-ನಟಿಯರಿಂದ ಮಾರು ಹೋಗುವಂತಹ ಜಾಹಿರಾತು ಪ್ರದರ್ಶಿಸುವುದರಿಂದ, ಆಮಿಷದಿಂದ, ಗೆಳೆಯ-ಗೆಳತಿಯರೊಂದಿಗೆ ತಮಾಷೆಗಾಗಿ ಪ್ರಾರಂಭವಾಗಿ ಚಟವಾಗಿ ಚಟ್ಟ ಕಟ್ಟುವುದರ ತನಕ ಅವರ ಸಂಸಾರವನ್ನು ರಸ್ತೆಗೆ ತರುವವರಗೂ ತಂಬಾಕು ಬಿಡುವುದಿಲ್ಲ.

ತಂಬಾಕು ವಿಶ್ವದಾದ್ಯಂತ ಬೆಳೆಯುವ ನಿಕೋಟಿಯಾನಾ ಕುಟುಂಬದ ಸಸ್ಯಗಳ ತಾಜಾ ಎಲೆಗಳಿಂದ ತಯಾರಿಸಲ್ಪಡುವ ಒಂದು ಕೃಷಿ ಉತ್ಪನ್ನವಾಗಿದೆ. ಇವುಗಳಲ್ಲಿ ನಿಕೋಟಿಯಾನಾ ಟಬಾಕಮ್ ಜಾತಿಯ ಸಸ್ಯ ಅತೀ ಹೆಚ್ಚು ಬಳಕೆಯಲ್ಲಿದೆ. ತಂಬಾಕಿನಲ್ಲಿಯ ಮಾದಕ ರಾಸಾಯನಿಕ ವಸ್ತುವನ್ನು ತಂಬಾಕಿನ ಎಲೆಗಳನ್ನು ಕಟಾವು ಮಾಡಿ ಉತ್ಕರ್ಷಣೆ(ಆಕ್ಸಿಡೆಶನ್)ಗೆ ಒಳಪಡಿಸಿದಾಗ ಎಲೆಗಳಲ್ಲಿನ ಕ್ಯಾರೋಟಿನಾಯ್ಡಗಳು ನಶಿಸಿ ನಶೆಯ ರುಚಿ ಹೆಚ್ಚಿಗೆ ಆಗುತ್ತದೆ. ಇದರೊಂದಿಗೆ ತಂಬಾಕಿನ ಪಿ.ಹೆಚ್ ಬದಲಾಯಿಸಲು ಹಲವಾರು ಇತರೆ ರಾಸಾಯನಿಕಗಳನ್ನು ಬೆರೆಸುತ್ತಾರೆ. ಇವುಗಳು ಒಟ್ಟಾರೆ ಜನರನ್ನು ತಂಬಾಕಿನ ಉತ್ಪನ್ನಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ.

ಅವಿದ್ಯೆ, ಬಡತನ, ದುರ್ಜನರ ಸಂಗ ಹಾಗೂ ಮಾನಸಿಕ ಒತ್ತಡ ಈ ರೀತಿಯಾಗಿ ಯಾವುದೋ ಒಂದು ಕಾರಣಕ್ಕೆ ತಂಬಾಕು ಉತ್ಪನ್ನಗಳಿಗೆ ಬಲಿಯಾಗಿ ಅದರ ದಾಸನಾಗಿ ವಾಸಿಯಾಗದಂತಹ ರೋಗಗಳಿಗೆ ತುತ್ತಾಗಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಈ ಕುರಿತು ಜಾಗತಿಕವಾಗಿ ಸಮೀಕ್ಷೆ ಮಾಡಲಾಗಿ ಶೇ. 22.3ರಷ್ಟು ಜನ ತಂಬಾಕಿನ ವ್ಯಸನಿಗಳಾಗಿದ್ದಾರೆ. ಇದರಲ್ಲಿ ಶೇ. 36.7 ಪುರುಷರಾದರೆ, ಮಹಿಳೆಯರು ಶೇ. 7.8ರಷ್ಟಿದ್ದಾರೆ. ಚೀನಾ ತಂಬಾಕು ಉತ್ಪನ್ನಗಳನ್ನು ಅತಿ ಹೆಚ್ಚು ಉತ್ಪಾದಿಸುವ ಹಾಗೂ ಬಳಸುವ ಪ್ರಥಮ ರಾಷ್ಟ್ರವಾಗಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ಬಡತನ ರೇಖೆಗಿಂತ ಕೆಳಗಿರುವ ರಾಷ್ಟ್ರದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕಿನ ಉತ್ಪನ್ನಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಾಗಿ ರೈತರು, ಬಡ ಕಾರ್ಮಿಕರು, ಶಾಲಾ-ಕಾಲೇಜು ಮಕ್ಕಳು, ಏಕಾಂಗಿಗಳು, ಬಹು ದಿನಗಳವರೆಗೆ ಕುಟುಂಬದಿಂದ ದೂರವಿರುವವರು ಇತ್ಯಾದಿ ರೀತಿಯ ಜನರು ಸ್ವಾಭಾವಿಕವಾಗಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗಿರುತ್ತಾರೆ.

ತಂಬಾಕು ಉತ್ಪನ್ನಗಳಾದ ಬೀಡಿ, ಸೀಗರೇಟ್, ಗುಟಕಾ, ಚಿರೂಟ್, ಹುಕ್ಕಾ, ಅಥವಾ ನೇರವಾಗಿ ತಂಬಾಕನ್ನು ಜಗಿಯುವುದು, ಕರಗಬಹುದಾದ ನಿಕೋಟಿನ್ ಉತ್ಪನ್ನಗಳು ಇತ್ಯಾದಿ. ಇವುಗಳಲ್ಲಿ ಯಾವುದೇ ಉತ್ಪನ್ನಗಳನ್ನು ಬಳಸಿದರೂ ಕ್ಷಯ, ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ, ಹೃದಯ ಸಂಬಂಧಿ ರೋಗಗಳು, ದೀರ್ಘಕಾಲದ ಬಳಕೆಯಿಂದ ಕಡಿಮೆಯಾಗದ ಶ್ವಾಸಕೋಶದ ಸೊಂಕು ಹಾಗೂ ಕ್ಯಾನ್ಸರ್ ರೋಗಗಳು ಉಂಟಾಗುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಆರೋಗ್ಯ ಸಂಸ್ಥೆ ವಿಶ್ವದಾದ್ಯಂತ ತಂಬಾಕು ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ 1987ರ ಮೇ 31ರಿಂದ ತಂಬಾಕುರಹಿತ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ.

ಔಷಧಿಯಾಗಿಯೂ ಬಳಕೆಯಾಗುತ್ತಿರುವ ತಂಬಾಕನ್ನು ಸರ್ಕಾರದ ಒಪ್ಪಿಗೆಯೊಂದಿಗೆ ಸರಿ ಸುಮಾರು 35 ಲಕ್ಷ ಹೇಕ್ಟೆರ್ ಪ್ರದೇಶಗಳಲ್ಲಿ ವಿಶ್ವದಾದ್ಯಂತ ಇಗಲೂ ಬೆಳೆಯುತ್ತಾರೆ. ಈ ಉತ್ಪನ್ನದ ಬೇಡಿಕೆ ಹೆಚ್ಚುತ್ತಿದ್ದಂತೆ ಪ್ರತಿ ವರ್ಷ 2 ಲಕ್ಷ ಹೆಕ್ಟೆರ್‌ನಷ್ಟು ಕೃಷಿ ಅಥವಾ ಕೃಷಿಯೇತರ ಭೂಮಿಯನ್ನು ತಂಬಾಕು ಬೆಳೆಯಲು ಬಳಕೆ ಮಾಡಿಕೊಂಡು, ರೈತರು ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದಾರೆ. ತಂಬಾಕು ಉತ್ಪನ್ನಕ್ಕಾಗಿ ಹೆಚ್ಚುವರಿಯಾಗಿ, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸುತ್ತಿರುವುದರಂದ ಮಣ್ಣಿನ ಫಲವತ್ತತೆ ಕಡಿವೆಯಾಗಿ ಮತ್ತು ಭೂಸವಕಳಿಗೆ ಕಾರಣವಾಗುತ್ತಿದೆ.

ತಿಳಿದೋ ತಿಳಿಯದೆಯೋ ತಂಬಾಕು ಉತ್ಪನ್ನಗಳಿಗೆ ದಾಸನಾಗುವ ಮೊದಲು ತಂಬಾಕಿನ ಕ್ರೂರ ಮುಖವನ್ನು ಅರಿತು ನಾವಾಯಿತು ಎಂಬಂತೆ ನಮ್ಮ ಕುಟುಂಬದ ಸದಸ್ಯರು ಹಾಗೂ ನೆಂಟರು, ಸಮಾಜದ ಪ್ರತಿ ಹಂತದ ವ್ಯಕ್ತಿಯೂ ಅರ್ಥೈಸಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವುದಾಗಿದೆ. ತಂಬಾಕು ಉತ್ಪನ್ನಗಳನ್ನು ತ್ಯಜಿಸೋಣ, ಸುಖ-ಸಂತೃಪ್ತ ಜೀವನ ನಡೆಸೋಣ.

'World No Tobacco Day'

– ರಾಮಚಂದ್ರ ಮೋನೆ
ವಿಜ್ಞಾನ ಶಿಕ್ಷಕರು,
ವಿದ್ಯಾದಾನ ಸಮಿತಿ ಬಾಲಕರ ಪ್ರೌಢಶಾಲೆ-ಗದಗ.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!