ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಶಂಕರ ದೇವಸ್ಥಾನದಲ್ಲಿ ಪುಣ್ಯ ಪುರುಷ ಯೋಗಿರಾಜ ಮಹಾರಾಜರ ಆರಾಧನಾ ಮಹೋತ್ಸವವು ಹಲವು ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮದೊಂದಿಗೆ ಶುಕ್ರವಾರ ಆರಂಭವಾಯಿತು.
ಯೋಗಿರಾಜರ ಆರಾಧ್ಯ ದೇವರಾಗಿರುವ ಇಲ್ಲಿಯ ಕನ್ಯೆಯರ ಬಾವಿಯಲ್ಲಿರುವ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಯೋಗಿರಾಜರ ಪಾದುಕೆಯನ್ನು ಪಾಲಕಿಯಲ್ಲಿ ಮೆರವಣಿಗೆ ಮೂಲಕ ತರುವುದರೊಂದಿಗೆ ಆರಾಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಾದುಕೆಯನ್ನು ಸ್ಥಾಪನೆ ಮಾಡಿ ವಿದ್ಯಾಶಂಕರ ದೇವರಿಗೆ ಲಘು ರುದ್ರಾಭಿಷೇಕ, ಮಂಜುನಾಥ ಭಟ್ಟ ದೊನ್ನಿಯವರ ನೇತೃತ್ವದಲ್ಲಿ ಗಣಪತಿ ಸಹಸ್ರ ಮೋದಕ ಹೋಮ ನೆರವೇರಿತು.
ಬೆಂಗಳೂರಿನ ಗೌರಿ ಅರುಣ ಕುಲಕರ್ಣಿ ಹಾಡಿದ ಭಕ್ತಿಗೀತೆಗಳು ಗಮನ ಸೆಳೆದರೆ, ಉಮೇಶ ಪಾಟೀಲರ ತಬಲಾ ವಾದನ ಆಕರ್ಷಿಸಿತು. ಧಾರವಾಡದ ತಾರಕೇಶ್ವರ ಭಜನಾ ಮಂಡಳ ಹಾಗೂ ಹುಬ್ಬಳ್ಳಿಯ ವಿಭಾವರಿ ಭಜನಾ ಮಂಡಳಿಯಿಂದ ವಿಶೇಷ ಭಜನಾ ಹಾಡುಗಳು ಮೊಳಗಿದವು.
ಇಲ್ಲಿಯ ಕಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಭಗವದ್ಗೀತಾ ಪಠಣವು ನೆರೆದ ಜನರನ್ನು ಆಕರ್ಷಿಸಿತು. ಈ ಬಾಲಕಿಯರಿಗೆ ಶ್ರೀ ಕೃಷ್ಣ ಭಗವದ್ಗೀತೆ ಮಂಡಳಿ ಮುಖ್ಯಸ್ಥೆ ವಿಜಯಲಕ್ಷಿö್ಮ ಕುಲಕರ್ಣಿ ತರಬೇತಿ ನೀಡಿದ್ದಾರೆ. ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ಮಹಾ ಪ್ರಸಾದ, ದೀಪೋತ್ಸವ ಶೇಜಾರತಿ, ಮಂತ್ರಪುಷ್ಪ ಹಾಗೂ ಅಷ್ಟಾವಧಾನ ಸೇವೆ ನಡೆಯಿತು.