ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಚಲನಚಿತ್ರ ಸಾಹಿತಿ, ನಿದೇರ್ಶಕ ಕಿನ್ನಾಳರಾಜ್‌ಗೆ ಈ ಸಲದ `ಶ್ರೀಸಿದ್ಧಶ್ರೀ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಿದ್ಧನಕೊಳ್ಳದ ಧರ್ಮಾಧಿಕಾರಿ ಶ್ರೀ ಶಿವಕುಮಾರ ಕಂಬಾಳಿಹಿರೇಮಠ ಶ್ರೀಗಳು ತಿಳಿಸಿದರು.
ಪಟ್ಟಣದ ಸ್ವಗೃಹದಲ್ಲಿ ನಿರ್ದೇಶಕ ಕಿನ್ನಾಳರಾಜ್‌ರನ್ನು ಸನ್ಮಾನಿಸಿ, ಆಶೀರ್ವದಿಸಿ ಅವರು ಈ ಘೋಷಣೆಯನ್ನು ಮಾಡಿದರು.
ಮೂಲತಃ ಕೊಪ್ಪಳ ತಾಲೂಕಿನ ಕಿನ್ನಾಳದವರಾದ ಮಂಜುನಾಥರು ಚಲನಚಿತ್ರ ರಂಗದಲ್ಲಿ ತಮ್ಮ ಸಾಹಿತ್ಯ ರಚನೆಯ ಮೂಲಕ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಕೆ.ಜಿ.ಎಫ್ 1,2 ಅಂಜನಿಪುತ್ರ, ಬಜಾರ್, ಜಂಟಲ್‌ಮನ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಭೈರತಿ ರಣಗಲ್ ಚಿತ್ರದ ಹಾಡುಗಳ ಮೂಲಕ ಜನಪ್ರಿಯತೆಯ ಉತ್ತುಂಗದಲ್ಲಿರುವ ಕಿನ್ನಾಳರಾಜ್‌ರನ್ನು ಈ ಸಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿನ್ನಾಳರಾಜ್, ಶ್ರೀಗಳ ಆಶೀರ್ವಾದ ದೊರಕುವದೆಂದರೆ ನಮ್ಮ ಪೂರ್ವ ಜನ್ಮದ ಪುಣ್ಯ. ಈ ಸಾರೆಯಿಂದ ನೀಡಲಾಗುತ್ತಿರುವ ರಾಜ್ಯ ಪ್ರಶಸ್ತಿಗೆ ಮೊದಲಿಗನಾಗಿ ಶ್ರೀಗಳು ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಉತ್ತರ ಕರ್ನಾಟಕ ಚಲನಚಿತ್ರೋತ್ಸವ ನಡೆಯುವದಿದ್ದರೆ ಅದು ಸಿದ್ಧನಕೊಳ್ಳದಲ್ಲಿ ಮಾತ್ರ. ಉತ್ತರ ಕರ್ನಾಟಕದ ಪ್ರತಿಭೆಯನ್ನು ಪ್ರಶಸ್ತಿಗೆ ಗುರುತಿಸಿರುವದಕ್ಕೆ ಹೆಮ್ಮಯಾಗಿದೆ ಎಂದರು.
ನಮ್ಮೂರಿನ ವಿಶ್ವನಾಥ ಎನ್ನುವವರು ಚಲನಚಿತ್ರ ರಂಗದಲ್ಲಿ ಜೂ. ಆರ್ಟಿಸ್ಟ್ ಆಗಿದ್ದರು. ಅವರಿಂದ ಪ್ರೇರಿತನಾದ ನಾನು ಅವರ ಸಹಾಯದಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರ ಅವರ ಪರಿಚಯವಾದ ಮೇಲೆ ಅವರು ನನ್ನನ್ನು ಚಿತ್ರ ಸಾಹಿತಿಯನ್ನಾಗಿ ಮಾಡಿದರು. ಅವರೇ ನನಗೆ ಕಿನ್ನಾಳರಾಜ್ ಎಂಬ ನಾಮಕರಣವನ್ನೂ ಮಾಡಿದರು. ಈವರೆಗೆ ನಾನು ಸುಮಾರು ೧೭೦ ಚಲನಚಿತ್ರ ಗೀತೆಗಳನ್ನು ಬರೆದಿದ್ದು, ಬಹುತೇಕ ಗೀತೆಗಳು ಹಿಟ್ ಆಗಿರುವುದು ನನ್ನ ಸೌಭಾಗ್ಯ. ಬೆಂಗಳೂರು ವಿಭಾಗದಲ್ಲಿ ಈಗಾಗಲೆ ಬಿಡುಗಡೆ ಕಂಡಿರುವ ಸಿಂಹರೂಪಿಣಿ ಐವತ್ತು ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಭಾಗದಲ್ಲಿ ಇಂದು ಸಿಂಹರೂಪಿಣಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಕಾಶ ಜಕರೆಡ್ಡಿ, ಡಾ. ಮಲ್ಲಿಕಾರ್ಜುನ ಮಳ್ಳಿ, ಅರ್ಜುನ ಮಿರಜಕರ, ವಿಜಯಲಕ್ಷ್ಮೀ ಚೌಕಿಮಠ ಮತ್ತು ರಾಜೇಶ್ವರಿ ಕಂಬಾಳಿಹಿರೇಮಠ ಇದ್ದರು.
**ಬಾಕ್ಸ್**