ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ್ ಫಾಲ್ಸ್ನಲ್ಲಿ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಭಾರೀ ಶಬ್ದ ಉಂಟಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಬೆಚ್ಚಿಬಿದ್ದ ಘಟನೆ ನಡೆದಿದೆ.
ಜೋಗ್ ಜಲಪಾತದ ರಾಕೆಟ್ ಫಾಲ್ಸ್ ಭಾಗದಲ್ಲಿ ಬಂಡೆಯ ಒಂದು ಪದರ ಕಳಚಿ ಬಿದ್ದಿದ್ದು, ಸುಮಾರು 100 ಅಡಿ ಎತ್ತರದಿಂದ ಈ ಕುಸಿತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಬಂಡೆ ಕುಸಿದ ರಭಸಕ್ಕೆ ಭಾರೀ ಶಬ್ದ ಕೇಳಿಬಂದಿದ್ದು, ಸ್ಥಳದಲ್ಲಿದ್ದ ಪ್ರವಾಸಿಗರು ಕೆಲಕಾಲ ಆತಂಕಕ್ಕೊಳಗಾದರು. ಬಂಡೆ ಕೆಳಗೆ ಬೀಳುತ್ತಿದ್ದಂತೆ ಜಲಪಾತದ ಅಡಿಭಾಗದಲ್ಲಿದ್ದ ನೀರು ತೀವ್ರವಾಗಿ ಕಲಕಿದ ದೃಶ್ಯ ಕಂಡುಬಂದಿದೆ.
ಬೇಸಿಗೆ ಹಿನ್ನೆಲೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಬಂಡೆಗಳು ಬಿಸಿಲಿನ ತಾಪಕ್ಕೆ ಬಿಸಿಯಾಗಿ ಪದರ ಕಳಚಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಬಂಡೆ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



