ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದ ನೆಪ ಇಟ್ಟುಕೊಂಡು ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಸೃಷ್ಟಿ ಮಾಡುತ್ತಿದೆ ಎಂದು ಜೆಡಿಎಸ್ ಗಂಬೀರವಾಗಿ ಆರೋಪ ಮಾಡಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ನಗರದ ಪ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರವನ್ನು ತೆರಿಗೆ ಭಯೋತ್ಪಾದಕ ಸರ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ ಅವರು; ರಾಜ್ಯದಲ್ಲಿ ಸುಳ್ಳು ಮತ್ತು ಅಭಿವೃದ್ಧಿ ಮಾರಕ ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಜನ ವಿರೋಧಿ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿದೆ.
ಗ್ಯಾರಂಟಿಗಳಿಗೆ ವಾರ್ಷಿಕ ಕೇವಲ ₹52,000 ಕೋಟಿಯಷ್ಟೇ ಅನುದಾನ ನೀಡುತ್ತಿದ್ದರೂ,₹4,09,549 ಕೋಟಿಯಷ್ಟು ಆಯವ್ಯಯದ ಹಣವೆಲ್ಲವೂ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದೆ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿಗೆ ತಿಲಾಂಜಲಿ ಇಟ್ಟು ದರ ಏರಿಕೆ, ಬೆಲೆ ಹೆಚ್ಚಳದ ಮೂಲಕ ಲಕ್ಷ್ಯಾಂತರ ಕೋಟಿ ರುಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ನಿರಂತರ ದರ, ಶುಲ್ಕ ಏರಿಕೆ:
ಹೊಸದಾಗಿ ಬಿ ಖಾತಾದಿಂದ ಎ ಖಾತಾ ಎನ್ನುವ ಜನರನ್ನು ಸುಲಿಗೆ ಮಾಡುವ ಬೋಗಸ್ ಕಾರ್ಯಕ್ರಮವೂ ಸೇರಿ ಅಬಕಾರಿ ಶುಲ್ಕ, ಮುದ್ರಾಂಕ ಮತ್ತು ಮಾರ್ಗಸೂಚಿ ಮೌಲ್ಯದ ಶುಲ್ಕ, ವಿದ್ಯುತ್ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಹಾಲು ಮತ್ತು ಮೊಸರು ದರ ಹೆಚ್ಚಳ, ಇದರ ಜೊತೆಗೆ, ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕ ಕೂಡ ಹೆಚ್ಚಿಸಲಾಗಿದೆ.
ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ತಾನು ಜನರ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಕಪಟ ನಾಟಕವಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಜನರಿಂದ ಹಣ ಸುಲಿಗೆ ಮಾಡುವುದು, ಆ ಹಣವನ್ನು ಗುತ್ತಿಗೆದಾರರ ಪೋಷಿತ ಅನಗತ್ಯ, ಅನಪೇಕ್ಷಿತ ಯೋಜನೆಗಳನ್ನು ರೂಪಿಸಿ ಅವುಗಳ ಮೇಲೆ ಸುರಿದಂತೆ ಮಾಡಿ ಮತ್ತೆ ಅದೇ ಹಣವನ್ನು ತನ್ನ ಜೀಬಿಗೆ ಇಳಿಸಿಕೊಳ್ಳುವ ಮೋಸದ ಜಾಲವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ.
ಅಲ್ಲದೆ, ಈ ಸರ್ಕಾರದ ಮೇಲೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಎಂದೂ, ಯಾವ ಸರ್ಕಾರದ ಮೇಲೆಯೂ ಬಾರದಷ್ಟು ಭ್ರಷ್ಟಾಚಾರ ಆರೋಪಗಳು ಬಂದಿವೆ. ಆಂತರಿಕ ಕಚ್ಚಾಟ, ಅಧಿಕಾರ ಲಾಲಸೆಯಿಂದ ಹಣ ಕೊಳ್ಳೆ ಹೊಡೆಯುವುದರಲ್ಲಿ ಸಚಿವರುಗಳು ಪೈಪೋಟಿಗೆ ಇಳಿದಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಸರ್ಕಾರಕ್ಕೆ ಜಿಬಿಎ ಎಟಿಎಂ ಆಗಿದೆ:
ದುಡ್ಡು ಕೊಳ್ಳೆ ಹೊಡೆಯಲು ಗ್ರೇಟರ್ ಬೆಂಗಳೂರು ನಗರವನ್ನು ಎಟಿಎಂ ಮಾಡಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರವು, ನಾಗರಿಕರ ಆಸ್ತಿಗಳ ಮೇಲೆ ಅಧಿಕವಾಗಿ ತೆರಿಗೆಯನ್ನು ವಿಧಿಸಿ ನಾಗರೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮೂಲಕ ‘ತೆರಿಗೆ ಭಯೋತ್ಪಾದನೆ’ ಸೃಷ್ಟಿಸುವ ಮೂಲಕ ‘ತೆರಿಗೆ ಭಯೋತ್ಪಾದಕ ಸರ್ಕಾರ’ (Tax Terrorism Government) ಎಂದು ಕುಖ್ಯಾತಿ ಆಗಿದೆ. ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲದ ರೀತಿಯಲ್ಲಿ ಜನರನ್ನು ತೆರಿಗೆ ರೂಪದಲ್ಲಿ ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರ ‘ತೆರಿಗೆ ಪಿಪಾಸು ಸರ್ಕಾರ’ವಾಗಿ ಜನರನ್ನು ತೆರಿಗೆ ಬೆಂಕಿಯಲ್ಲಿ ಬೇಯಿಸುತ್ತಿದೆ ಎಂದು ಮಾಜಿ ಶಾಸಕರು ಕಿಡಿಕಾರಿದರು.
ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಕಾಂಗ್ರೆಸ್ ಸರಕಾರವು, ಜಿಎಸ್’ಟಿ ಸರಳೀಕರಣದ ಬಳಿಕ ರಾಜ್ಯದಲ್ಲಿ ಬೆಲೆಗಳ ಇಳಿಕೆ ಮಾಡಬೇಕಿತ್ತು. ಆದರೆ ಏಕಾಏಕಿ ನಂದಿನಿ ತುಪ್ಪದ ಬೆಲೆಯನ್ನು ಪ್ರತೀ ಕೆಜಿಗೆ ₹90 ಏರಿಸುವ ಮೂಲಕ ಗ್ರಾಹಕರ ದರೋಡೆಗೆ ಇಳಿದಿದೆ.
ಜನ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ನಾಡಿನ ಬಡವರು, ಜನಸಾಮಾನ್ಯರ ಉದ್ಧಾರ ಅಸಾಧ್ಯವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ರಮೇಶ್ ಗೌಡ ಆರೋಪ ಮಾಡಿದರು.ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಪಕ್ಷದ ಮುಖಂಡರಾದ ತಿಮ್ಮೇಗೌಡ, ಶೈಲಜಾ ರಾವ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.


