ಬೆಂಗಳೂರು: ಪ್ರತಿ ತಿಂಗಳು ‘ಜೀರೋ ಬಿಲ್’ ನೋಡಿ ನಿರಾಳವಾಗುತ್ತಿದ್ದ ರಾಜಧಾನಿಯ ಜನರಿಗೆ ಈ ಬಾರಿ ಬಂದಿರುವ ಕರೆಂಟ್ ಬಿಲ್ ನೋಡಿ ತೀವ್ರ ಆಘಾತವಾಗಿದೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದ ಬೆಂಗಳೂರಿನ ನೂರಾರು ಕುಟುಂಬಗಳಿಗೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೇ 4,000 ದಿಂದ 5,000 ರೂಪಾಯಿ ಬಿಲ್ ಕೈಸೇರಿದ್ದು, ರಾಜಧಾನಿಯಲ್ಲಿ ಬೆಸ್ಕಾಂ (BESCOM) ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.
ಸಣ್ಣ ಮನೆಗಳಿಗೂ ಭಾರಿ ಮೊತ್ತದ ಬಿಲ್: ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಈವರೆಗೆ ನಿಯಮಿತವಾಗಿ ಜೀರೋ ಬಿಲ್ ಪಡೆಯುತ್ತಿದ್ದ ಬೆಂಗಳೂರಿನ ಶಿವಾಜಿನಗರದ ಮಖಾನ್ ಕಾಂಪೌಂಡ್ ಸೇರಿದಂತೆ ಹಲವು ಭಾಗಗಳ ನಿವಾಸಿಗಳಿಗೆ, ಈ ಬಾರಿ ಇದ್ದಕ್ಕಿದ್ದಂತೆ ಬೆಸ್ಕಾಂನಿಂದ ಭಾರಿ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿದೆ. ಸಣ್ಣ ಮನೆಗಳಿಗೂ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರುವುದನ್ನು ವಿರೋಧಿಸಿ ಸ್ಥಳೀಯರು ಬೆಸ್ಕಾಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉಚಿತ ಸೌಲಭ್ಯ ಸಿಗುತ್ತದೆ ಎಂದು ನಿರಾಳವಾಗಿದ್ದ ಕುಟುಂಬಗಳಿಗೆ ಏಕಾಏಕಿ ಬಂದ ಈ ಬಿಲ್ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸಾಫ್ಟ್ವೇರ್ ತಾಂತ್ರಿಕ ದೋಷ ಎಂದ ಬೆಸ್ಕಾಂ: ಈ ಗೊಂದಲದ ಕುರಿತು ಸ್ಪಷ್ಟನೆ ನೀಡಿರುವ ಬೆಸ್ಕಾಂ ಅಧಿಕಾರಿಗಳು, ಕಳೆದ ಎರಡು ತಿಂಗಳುಗಳಿಂದ ಬಿಲ್ಲಿಂಗ್ ಸಾಫ್ಟ್ವೇರ್ ಅಥವಾ ಸರ್ವರ್ಗಳಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಉಚಿತ ಯೂನಿಟ್ಗಳು ಸರಿಯಾಗಿ ಲೆಕ್ಕಾಚಾರವಾಗದೆ ಪೂರ್ಣ ಬಿಲ್ ಜನರೇಟ್ ಆಗಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರಲ್ಲಿ ತೀವ್ರ ಆತಂಕ ಹಾಗೂ ಗೊಂದಲ: ಈ ಹಿಂದಿನ ತಿಂಗಳುಗಳಲ್ಲಿ ಜೀರೋ ಬಿಲ್ ಪಡೆಯುತ್ತಿದ್ದ ಗ್ರಾಹಕರು, ಇದು ಕೇವಲ ತಾಂತ್ರಿಕ ದೋಷದಿಂದ ಬಂದಿರುವ ಬಿಲ್ ಆಗಿದೆಯೇ ಅಥವಾ ತಾವು ನಿಜವಾಗಿಯೂ ಈ ಭಾರಿ ಮೊತ್ತವನ್ನು ಪಾವತಿಸಬೇಕೇ ಎಂಬ ಗೊಂದಲ ಹಾಗೂ ಆತಂಕದಲ್ಲಿದ್ದಾರೆ.



