ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಮತ್ತೊಂದು ಪ್ರಮುಖ ಅಪ್ಡೇಟ್ ಹೊರಬಿದ್ದಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ‘ಲೇಡಿಸ್ & ಲೇಡಿಸ್’ ಟೀಸರ್ ಮೂಲಕ ಸಿನಿಮಾದಲ್ಲಿ ನಟಿಸಿರುವ ಐವರು ಪ್ರಮುಖ ನಟಿಯರ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸಿದ್ದು, ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಶಿ ಈ ಟೀಸರ್ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪ್ರತಿಯೊಬ್ಬರಿಗೂ ವಿಭಿನ್ನ ಲುಕ್ ಹಾಗೂ ಪ್ರತ್ಯೇಕ ಕ್ಯಾರೆಕ್ಟರ್ ಶೇಡ್ ನೀಡಲಾಗಿದ್ದು, ಮಹಿಳಾ ಪಾತ್ರಗಳಿಗೂ ಕಥೆಯಲ್ಲಿ ನಿರ್ಣಾಯಕ ಸ್ಥಾನವಿದೆ ಎಂಬುದು ಸ್ಪಷ್ಟವಾಗಿದೆ.
ಸ್ಟೈಲಿಷ್ ವಿಷ್ಯುಯಲ್ಸ್, ಗ್ಲಾಮರ್, ಆ್ಯಕ್ಷನ್ ಮತ್ತು ಡಾರ್ಕ್ ಥೀಮ್ನೊಂದಿಗೆ ಮೂಡಿಬಂದಿರುವ ಟೀಸರ್ ಆರಂಭದಲ್ಲೇ ‘ಡೇಂಜರ್’ ವಾರ್ನಿಂಗ್ ಮೂಲಕ ಕುತೂಹಲ ಹೆಚ್ಚಿಸುತ್ತದೆ. ‘ಮಕ್ಕಳು ದೂರವಿರಿ… ಪೋಷಕರೇ ಎಚ್ಚರ… ಅಜ್ಜ-ಅಜ್ಜಿಯರೂ ನಿಮ್ಮ ರಿಸ್ಕ್’ ಎಂಬ ಸಂದೇಶ ಚಿತ್ರದ ವಿಭಿನ್ನ ಪ್ರಸ್ತುತಿಯನ್ನು ಸೂಚಿಸುತ್ತದೆ.
ಟೀಸರ್ನಲ್ಲಿನ ಯಶ್ ಅವರ ‘ಲೇಡಿಸ್ & ಲೇಡಿಸ್… ಒಬ್ಬೊಬ್ಬರಾಗಿ ಬರ್ತೀರಾ, ಒಟ್ಟೊಟ್ಟಿಗೇ ಬರ್ತೀರಾ?’ ಎಂಬ ಡೈಲಾಗ್ ಅಭಿಮಾನಿಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಯನತಾರಾ ಉಗ್ರ ವ್ಯಕ್ತಿತ್ವದಲ್ಲಿ, ಕಿಯಾರಾ ಅಡ್ವಾಣಿ ಗ್ಲಾಮರಸ್ ಲುಕ್ನಲ್ಲಿ, ತಾರಾ ಸುತಾರಿಯಾ ಅಗ್ರೆಸಿವ್ ಅವತಾರದಲ್ಲಿ, ರುಕ್ಮಿಣಿ ವಸಂತ್ ಗಟ್ಟಿಯಾದ ಪಾತ್ರದಲ್ಲಿ ಹಾಗೂ ಹುಮಾ ಖುರೇಶಿ ತೀವ್ರ ಅಭಿವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಯಶ್ ಪಾತ್ರದ ಸುತ್ತಲೇ ನಿರ್ಮಾಣವಾಗಿದ್ದ ‘ಟಾಕ್ಸಿಕ್’ ಕುತೂಹಲಕ್ಕೆ ಇದೀಗ ಐದು ಮಹಿಳಾ ಪಾತ್ರಗಳ ಸೇರ್ಪಡೆ ಹೊಸ ಆಯಾಮ ನೀಡಿದೆ. ‘ಲೇಡಿಸ್ & ಲೇಡಿಸ್’ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.



