ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯ ಗೌಡ ಪಾಟೀಲ್ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ನ ಹಿರಿಯ ಸಚಿವರು ಹಾಗೂ ಶಾಸಕರ ಮನವೊಲಿಕೆಯ ಬಳಿಕ ಅವರು ರಾಜೀನಾಮೆಯನ್ನು ಹಿಂಪಡೆಯಲು ಮುಂದಾಗಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಪಟ್ಟಿ ಪ್ರಕಟವಾದ ತಕ್ಷಣ ಅಸಮಾಧಾನಗೊಂಡಿದ್ದ ಯಶವಂತರಾಯ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ರಾಜೀನಾಮೆ ಪತ್ರವನ್ನು ಹಿಂಪಡೆಯಲು ವಿಧಾನಸಭೆ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ರಾಜೀನಾಮೆ ಸಲ್ಲಿಸಿದ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಕಾಂಗ್ರೆಸ್ನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲ. 2023ರ ಚುನಾವಣೆಗೆ ಮುನ್ನ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಆ ಭರವಸೆ ಉಳಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿದ್ದರು.
ಅಲ್ಲದೆ, ಕಳೆದ ಬಾರಿ ನಿಗಮ-ಮಂಡಳಿ ಸ್ಥಾನ ನೀಡುವುದಾಗಿ ಹೇಳಿದರೂ ತಾವು ನಿರಾಕರಿಸಿದ್ದೆ. ಸ್ವಾತಂತ್ರ್ಯ ಬಂದ ನಂತರದಿಂದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ತಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಹಾಗೂ ಶಾಸಕನಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ ಎಂದು ಕೂಡ ಕಿಡಿಕಾರಿದ್ದರು.
ಆದರೆ ಪಕ್ಷದ ಹಿರಿಯ ನಾಯಕರು ಹಾಗೂ ಶಾಸಕರು ನಡೆಸಿದ ನಿರಂತರ ಮಾತುಕತೆ ಮತ್ತು ಮನವೊಲಿಕೆಯ ನಂತರ ಯಶವಂತರಾಯ ಗೌಡ ಪಾಟೀಲ್ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ರಾಜೀನಾಮೆ ಹಿಂಪಡೆಯಲು ಮುಂದಾಗಿದ್ದಾರೆ.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆಯ ಅಂಗವಾಗಿ ಈಗಾಗಲೇ 19 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.



