HomeGadag Newsಶಾಲಾ ಮಕ್ಕಳಿಂದ ಹಸಿರು ಸಂಭ್ರಮ

ಶಾಲಾ ಮಕ್ಕಳಿಂದ ಹಸಿರು ಸಂಭ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಉದ್ದೇಶದಿಂದ ಗದಗ-ಬೆಟಗೇರಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಆವರಣದಲ್ಲಿ ಸಸಿ ನೆಡುವ ಹಾಗೂ ಪಾಲನಾ ಆಂದೋಲನ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಸಸಿ ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪ ತೊಟ್ಟರು. ಮಕ್ಕಳೊಂದಿಗೆ ರೋಟರಿ ಕ್ಲಬ್‌ನ ಪದಾಧಿಕಾರಿಗಳೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಇದು ಕೇವಲ ಸಸಿ ವಿತರಣಾ ಕಾರ್ಯಕ್ರಮವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಪರಂಪರೆಯನ್ನು ಉಳಿಸುವ ಜನಾಂದೋಲನವಾಗಿದೆ. ನಾವು ಇಂದು ನೆಡುವ ಪ್ರತಿಯೊಂದು ಮರವು ಮುಂದಿನ ತಲೆಮಾರಿಗೆ ಹಾಗೂ ಪರಿಸರಕ್ಕೆ ಬಹುದೊಡ್ಡ ಶಕ್ತಿಯಾಗಲಿದೆ ಎಂದು ಉಚಿತ ಸಸಿ ವಿತರಣಾ ಅಭಿಯಾನದ ರೋಟರಿ ಕ್ಲಬ್ ಪರಿಸರೋತ್ಸವದ ಕಾರ್ಯಕ್ರಮ ಅಧ್ಯಕ್ಷ ಸುರೇಶ ಕುಂಬಾರ ಹೇಳಿದರು.

ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದೆ. ಮರಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಪೋಷಿಸುವ ಮೂಲಕವೇ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ ಎಂದರು.

ಮರ ಕಡಿದರೆ ಮಳೆ ನಿಲ್ಲುತ್ತದೆ, ಮರ ನೆಟ್ಟರೆ ಮಳೆ ಬರುತ್ತದೆ ಎಂಬುದು ಕೇವಲ ಮಾತಲ್ಲ, ಅದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಮರಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ. ನಗರಗಳ ಉಷ್ಣತೆ ತಗ್ಗಿಸುವಲ್ಲಿಯೂ ಮರಗಳ ಪಾತ್ರ ಅಪಾರ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ದಿಂಡಿ ಮಾತನಾಡಿ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಸಿ ನೆಟ್ಟು ಸಂಭ್ರಮಿಸಿರುವುದು ಸಂತಸ ತಂದಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿರುವುದು ಶ್ಲಾಘನೀಯ. ನೆಟ್ಟ ಸಸಿಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ಮರಗಳನ್ನಾಗಿ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಬಿ.ಎಂ. ಸೈಯದ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಜಕ್ಕಲಿ ನಿರೂಪಿಸಿದರು. ಶಿಕ್ಷಕಿ ರುಕ್ಮಿಣಿ ಗುಳಗಂದಿ ವಂದಿಸಿದರು.

ಶಿಕ್ಷಕಿಯರಾದ ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ, ಲಲಿತಾ ಚನ್ನಪ್ಪಗೌಡರ, ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕ ಮದನಿ ಬಾದಷಾ ಸರ್ವರ, ರಮೇಶ ಮೇಡಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img