ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದ ಸರ್ವಜನಾಂಗವು ಸುಂದರ ನಂದನವನದ ತೋಟವಿದ್ದಂತೆ. ಪ್ರತಿಯೊಂದು ಹಬ್ಬವನ್ನು ಅರ್ಥಪೂರ್ಣವಾಗಿ, ಸಂತೋಷ ಹಾಗೂ ಸೌಹಾರ್ದತೆಯಿಂದ ಆಚರಿಸಿದಾಗ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಹೇಳಿದರು.
ಡಂಬಳ ಗ್ರಾಮದ ಹೊರಠಾಣೆಯಲ್ಲಿ ಗದಗ ಜಿಲ್ಲಾ ಪೊಲೀಸ್ ಹಾಗೂ ನರಗುಂದ ಉಪವಿಭಾಗದ ಮುಂಡರಗಿ ಪೊಲೀಸ್ ಠಾಣೆಗಳ ಸಂಯುಕ್ತ ಆಶ್ರಯದಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.
ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಯಪ್ಪ ಸಿದ್ಧಣ್ಣವರ ಮಾತನಾಡಿ, ಲಿಂ. ಡಾ. ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳು ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬದುಕುವ ಸಂದೇಶ ನೀಡಿದ್ದಾರೆ. ಅದರಂತೆ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುತ್ತೇವೆ ಎಂದರು.
ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ಮಾತನಾಡಿ, ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ರೈತರು ಹಾಗೂ ಕಾರ್ಮಿಕ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಈದ್ ಮಿಲಾದ್ ಹಬ್ಬವನ್ನು ಆಡಂಬರವಿಲ್ಲದೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಡಂಬಳ ಹೋಬಳಿಯ ೨೪ ಗ್ರಾಮಗಳಲ್ಲಿ ಹಬ್ಬದ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಬೋರ್ವೆಲ್ಗಳ ಕೇಬಲ್ ಹಾಗೂ ರೈತರ ಪರಿಕರಗಳ ಕಳ್ಳತನ ತಡೆಯಲು ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದರು.
ಸಭೆಯಲ್ಲಿ ಮಹೇಶ ಗಡಗಿ, ಕೆ.ಕೆ. ಬಂಡಿ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ಮಲ್ಲೇಶ ಮಠದ, ಕುಬೇರಪ್ಪ ಕೊಳ್ಳಾರ, ಜಾಕೀರ ಮೂಲಿಮನಿ, ಪ್ರಜ್ವಲ್ ಮಾನೆ, ಶಿವಾನಂದ ಬಂಡಿ, ಲೆಂಕಪ್ಪ ಕದಡಿ, ಮುತ್ತು ಭೋವಿ, ಮಹೇಶ ಬಿಸನಳ್ಳಿ, ಮಲ್ಲೇಶ ಸಂಜಿವಣ್ಣನವರ, ಗೋವಿಂದಪ್ಪ ಆನಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.



