ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಇಟ್ಟುಕೊಂಡು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶದ ನಿವಾಸಿಗಳು ಪತ್ತೆಯಾಗಿರುವ ಪ್ರಕರಣ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಾಖಲೆಗಳ ಪರಿಶೀಲನೆ ವೇಳೆ ಇಬ್ಬರೂ ಬಾಂಗ್ಲಾದೇಶದವರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಭಾರತಕ್ಕೆ ಇವರ ಪ್ರವೇಶ ಹೇಗಾಯಿತು? ಪಶ್ಚಿಮ ಬಂಗಾಳದ ವಿಳಾಸದ ಆಧಾರ್ ಕಾರ್ಡ್ ಇವರ ಕೈಗೆ ಹೇಗೆ ಬಂತು? ಗದಗಕ್ಕೆ ಇವರನ್ನು ಕರೆತಂದವರು ಯಾರು? ಎಂಬ ಪ್ರಶ್ನೆಗಳು ಇದೀಗ ಪೊಲೀಸರನ್ನು ಕಾಡುತ್ತಿವೆ.
ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾಮಗಾರಿ ಸ್ಥಳದಲ್ಲಿ ಕಳೆದ ಎರಡು ತಿಂಗಳಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ೨೬ ವರ್ಷದ ಸಕೀಬ್ ಸಹೀನ್ ಹಾಗೂ ೨೨ ವರ್ಷದ ದಿಲಾವರ್ ಹುಸೇನ್ ಎಂಬ ಇಬ್ಬರನ್ನು ಗದಗ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೂಲಿ ಕಾರ್ಮಿಕರಾಗಿ ಬಂದು ಸಿಕ್ಕಿಬಿದ್ದವರು
ಪಶ್ಚಿಮ ಬಂಗಾಳದಿಂದ ಬಂದಿದ್ದ ಕೂಲಿ ಕಾರ್ಮಿಕರ ತಂಡದೊಂದಿಗೆ ಈ ಇಬ್ಬರು ಗದಗಕ್ಕೆ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಹರ್ತಿಯ ಕಾಮಗಾರಿ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರ ಬಳಿ ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.
ಆದರೆ, ಪೊಲೀಸರಿಗೆ ಲಭ್ಯವಾದ ಮಾಹಿತಿಯ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರೂ ಬಾಂಗ್ಲಾದೇಶದ ನಿವಾಸಿಗಳು ಎಂಬುದು ಬೆಳಕಿಗೆ ಬಂದಿದೆ. ಇವರ ಜನ್ಮಸ್ಥಳ ಬಾಂಗ್ಲಾದೇಶ ಎಂದು ದಾಖಲೆಗಳಲ್ಲಿ ನಮೂದಾಗಿರುವುದು ಪೊಲೀಸರ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ. ಹೀಗಾಗಿ ಇವರ ಬಳಿ ದೊರೆತ ದಾಖಲೆಗಳ ಸತ್ಯಾಸತ್ಯತೆ ಹಾಗೂ ಅವರು ಭಾರತದಲ್ಲಿ ನೆಲೆಸಿರುವ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಧಾರ್ ಸಿಕ್ಕಿದ್ದೇಗೆ?
ಬಾಂಗ್ಲಾದೇಶದ ನಿವಾಸಿಗಳಾಗಿದ್ದರೆ ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಇವರ ಕೈಗೆ ಹೇಗೆ ಬಂತು ಎಂಬುದು ತನಿಖೆಯ ಪ್ರಮುಖ ಪ್ರಶ್ನೆಯಾಗಿದೆ. ದಾಖಲೆಗಳು ನಕಲಿಯೇ? ಅಕ್ರಮವಾಗಿ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆಯೇ? ಅಥವಾ ಯಾರಾದರೂ ಇವರಿಗೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆಯೇ ಎಂಬ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಇಬ್ಬರೂ ಈ ಹಿಂದೆ ಬೆಂಗಳೂರು, ಮಂಗಳೂರು, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧೆಡೆ ಕೂಲಿ ಕೆಲಸ ಮಾಡಿದ್ದರೆನ್ನಲಾಗಿದೆ. ಹೀಗಾಗಿ ಅವರು ಈ ಸ್ಥಳಗಳಲ್ಲಿ ಯಾವ ದಾಖಲೆಗಳ ಆಧಾರದಲ್ಲಿ ಕೆಲಸ ಮಾಡಿದರು, ಅವರನ್ನು ಒಂದೊಂದು ಊರಿಗೆ ಕರೆದುಕೊಂಡು ಹೋಗುತ್ತಿದ್ದವರು ಯಾರು, ಅವರೊಂದಿಗೆ ಇನ್ನೂ ಯಾರಾದರೂ ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ಗುತ್ತಿಗೆದಾರರಿಗೂ ಗೊತ್ತಿತ್ತಾ?
ಕಾಮಗಾರಿ ಸ್ಥಳದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲಾಗಿತ್ತೇ? ಗುತ್ತಿಗೆದಾರರಿಗೆ ಇವರ ಹಿನ್ನೆಲೆ ತಿಳಿದಿತ್ತೇ? ಪಶ್ಚಿಮ ಬಂಗಾಳದ ವಿಳಾಸದ ಆಧಾರ್ ಕಾರ್ಡ್ ಆಧರಿಸಿಯೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತೇ ಎಂಬ ಪ್ರಶ್ನೆಗಳಿಗೂ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.
ಇದು ಕೇವಲ ಇಬ್ಬರು ಅಕ್ರಮ ವಲಸಿಗರ ಪತ್ತೆ ಪ್ರಕರಣವೇ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಅನುಮಾನವೂ ಮೂಡಿದೆ. ಇಬ್ಬರು ರಾಜ್ಯದ ವಿವಿಧೆಡೆ ಕೆಲಸ ಮಾಡಿರುವ ಮಾಹಿತಿ ಹಿನ್ನೆಲೆಯಲ್ಲಿ, ಇವರ ಸಂಪರ್ಕದಲ್ಲಿದ್ದವರು ಹಾಗೂ ದಾಖಲೆಗಳ ಸೃಷ್ಟಿಗೆ ನೆರವಾದವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಇವರ ಹಿಂದೆ ಇನ್ನಾರಾದರೂ ಇದ್ದಾರೆಯೇ? ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಸಿದ್ಧಪಡಿಸುವ ಜಾಲವಿದೆಯೇ? ಇನ್ನೂ ಹೆಚ್ಚಿನ ಮಂದಿ ಇದೇ ರೀತಿಯಲ್ಲಿ ರಾಜ್ಯದಲ್ಲಿ ನೆಲೆಸಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ತನಿಖೆ ಮುಂದುವರಿದಂತೆ ಉತ್ತರ ಸಿಗಬೇಕಿದೆ.
ಭಾರತ ಪ್ರವೇಶದಿಂದ ದಾಖಲೆಗಳವರೆಗೆ ಜಾಡು
ಹರ್ತಿಯಲ್ಲಿ ಪತ್ತೆಯಾದ ಇಬ್ಬರು ಬಾಂಗ್ಲಾದೇಶದ ನಿವಾಸಿಗಳ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಾರತಕ್ಕೆ ಅವರು ಯಾವ ಮಾರ್ಗದಿಂದ ಪ್ರವೇಶಿಸಿದರು, ಗದಗಕ್ಕೆ ಕರೆತಂದವರು ಯಾರು, ಪಶ್ಚಿಮ ಬಂಗಾಳದ ವಿಳಾಸದ ಆಧಾರ್ ಕಾರ್ಡ್ ಹೇಗೆ ದೊರೆಯಿತು ಹಾಗೂ ರಾಜ್ಯದ ವಿವಿಧೆಡೆ ಅವರು ಹೇಗೆ ಕೆಲಸ ಮಾಡಿದರು ಎಂಬುದರ ಸುತ್ತ ತನಿಖೆಯ ಜಾಡು ಸಾಗುತ್ತಿದೆ.
“ಇಬ್ಬರ ಹಿನ್ನೆಲೆ, ಭಾರತಕ್ಕೆ ಪ್ರವೇಶಿಸಿದ ರೀತಿ, ಅವರ ಬಳಿ ದೊರೆತ ದಾಖಲೆಗಳು ಹಾಗೂ ಅವರು ಈ ಹಿಂದೆ ಕೆಲಸ ಮಾಡಿರುವ ಸ್ಥಳಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.”
— ರೋಹನ್ ಜಗದೀಶ್, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ



