HomeUncategorizedಶ್ರಾವಣದ ಸೊಬಗಿನಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮೀ ಆರಾಧನೆ

ಶ್ರಾವಣದ ಸೊಬಗಿನಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮೀ ಆರಾಧನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ನರೇಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವರಮಹಾಲಕ್ಷ್ಮೀ ಪೂಜೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು. ಮನೆಮನೆಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಹೂವಿನ ಅಲಂಕಾರ, ದೀಪಗಳ ಬೆಳಕು, ಮಂಗಳಗೀತೆ ಹಾಗೂ ಸಿಹಿ-ಸವಿಯೂಟದ ವಾತಾವರಣ ಕಳೆಗಟ್ಟಿತ್ತು.

ಕುಟುಂಬದ ಸುಖ-ಶಾಂತಿ, ಆರೋಗ್ಯ, ಆಯುಷ್ಯ, ಐಶ್ವರ್ಯ ಹಾಗೂ ಸಮೃದ್ಧಿಗಾಗಿ ಮಹಿಳೆಯರು ವರಮಹಾಲಕ್ಷ್ಮೀ ವ್ರತ ಆಚರಿಸಿದರು. ಪೂಜೆಗೆ ಮುನ್ನವೇ ಹೂವು, ಹಣ್ಣು, ತೆಂಗಿನಕಾಯಿ, ಬಾಳೆದಿಂಡು, ಮಾವಿನ ತೋರಣ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಶುಕ್ರವಾರ ಬೆಳಗ್ಗೆಯೇ ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಹಾಗೂ ಬಾಳೆಕಂಬಗಳನ್ನು ಕಟ್ಟಿ, ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದರು. ಕಳಶ ಪ್ರತಿಷ್ಠಾಪಿಸಿ ಅರಿಶಿಣ, ಕುಂಕುಮ ಹಾಗೂ ಹೂವುಗಳಿಂದ ಅಲಂಕರಿಸಿ, ಲಕ್ಷ್ಮೀ ದೇವಿಯ ಮೂರ್ತಿಗೆ ವಿವಿಧ ಆಭರಣ ಮತ್ತು ಹೂವಿನ ಅಲಂಕಾರ ಮಾಡಿದರು.

ಬಾಳೆಕಂಬ, ಹೂವಿನ ಹಾರ, ಬಣ್ಣಬಣ್ಣದ ತೋರಣ ಹಾಗೂ ದೀಪಗಳಿಂದ ಸಿಂಗರಿಸಿದ ಪೂಜಾ ಮಂಟಪಗಳು ಕಣ್ಮನ ಸೆಳೆದವು. ಹಣ್ಣು, ತೆಂಗಿನಕಾಯಿ ಹಾಗೂ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಧೂಪ-ದೀಪ ಬೆಳಗಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಗೃಹಿಣಿಯರು ಹೊಸ ಸೀರೆ ಧರಿಸಿ ಸಾಂಪ್ರದಾಯಿಕ ಅಲಂಕಾರದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿದರು. ಗೋಧಿಹುಗ್ಗಿ, ಕರ್ಜಿಕಾಯಿ, ಕಡುಬು, ಅನ್ನ-ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿ ಪ್ರಸಾದ ವಿತರಿಸಿದರು.

ಸಂಜೆಯಾಗುತ್ತಿದ್ದಂತೆ ಮಹಿಳೆಯರು ಅಕ್ಕಪಕ್ಕದ ಮನೆಗಳಿಗೆ ತೆರಳಿ ಪರಸ್ಪರ ಅರಿಶಿಣ-ಕುಂಕುಮ, ಹೂವು, ತಾಂಬೂಲ ಹಾಗೂ ಸೌಭಾಗ್ಯದ ಸಾಮಗ್ರಿಗಳನ್ನು ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದರಿಂದ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.

ವರಮಹಾಲಕ್ಷ್ಮೀ ಹಬ್ಬವು ಧಾರ್ಮಿಕ ಆಚರಣೆಯ ಜತೆಗೆ ಕುಟುಂಬ ಸದಸ್ಯರನ್ನು ಒಗ್ಗೂಡಿಸುವ ಹಾಗೂ ಮಹಿಳೆಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ಶ್ರಾವಣದ ಹಸಿರು ಸೊಬಗಿನ ನಡುವೆ ದೀಪದ ಬೆಳಕು, ಹೂವಿನ ಪರಿಮಳ ಹಾಗೂ ಭಕ್ತಿಯ ವಾತಾವರಣ ಎಲ್ಲೆಡೆ ಮನೆಮಾಡಿತ್ತು.

ಕುಟುಂಬದ ಎಲ್ಲ ಸದಸ್ಯರಿಗೆ ಆರೋಗ್ಯ, ಆಯುಷ್ಯ, ಐಶ್ವರ್ಯ ಹಾಗೂ ನೆಮ್ಮದಿ ದೊರೆಯಲಿ, ಎಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ಮಹಿಳೆಯರು ಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸಿದರು.

ಸಂಭ್ರಮದಲ್ಲಿ ಸ್ನೇಹಾ ರಾಠೋಡ್, ಜ್ಯೋತಿ ವಂಕಲಕುಂಟಿ, ವಿಜಯಲಕ್ಷ್ಮಿ ಹಿರೇಮಠ, ಈರಮ್ಮ ಹುಲ್ಲೂರ, ಸವಿತಾ ಬೇವಿನಕಟ್ಟಿ, ಶೋಭಾ, ಐಶ್ವರ್ಯ, ವಿದ್ಯಾ, ಚನ್ನಮ್ಮ, ಲಕ್ಷ್ಮೀ ಕಲ್ಲೂರ, ಗಂಗಮ್ಮ ಕಲ್ಲೂರ, ರಶ್ಮಿ ಕರಮುಡಿ, ಸಾವಿತ್ರಿ ಕಡೆತೋಟದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img