ಲಕ್ನೋ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡು ಅಂತಸ್ತಿನ ಮನೆಯೊಂದು ಸಂಪೂರ್ಣವಾಗಿ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಫತೇಹ್‌ಪುರ ಜಿಲ್ಲೆಯ ಮಲ್ವಾನ್ ಪಟ್ಟಣದಲ್ಲಿ ನಡೆದಿದೆ.
ಹಣ್ಣು ಮತ್ತು ತರಕಾರಿ ವ್ಯಾಪಾರಿ ಸುರೇಶ್ ಗುಪ್ತಾ ಅಲಿಯಾಸ್ ಚುನ್ನಾರ್ ಅವರ ಮನೆಯಲ್ಲಿ ಸಂಜೆ ಸುಮಾರು 5 ಗಂಟೆಗೆ ಊಟ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಎರಡು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಕುಸಿದಿದ್ದು, ಮನೆಯಲ್ಲಿದ್ದವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಕೆಲವು ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಅವಶೇಷಗಳಡಿ ಸಿಲುಕಿದ್ದ ಏಳು ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಪುರುಷರಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.



