ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇಂದು ನಾಲ್ಕನೇ ದಿನವೂ ಮುಂದುವರಿಯಲಿದೆ.
ಇಂದಿನ ವಿಚಾರಣೆಯಲ್ಲೇ ಮಾಫಿ ಸಾಕ್ಷ್ಯ ಹೇಳಿಕೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಮಾಫಿ ಸಾಕ್ಷ್ಯ ಹೇಳಿಕೆ ಪೂರ್ಣಗೊಂಡ ಬಳಿಕ ಪ್ರದೋಷ್ ಅವರ ಕ್ರಾಸ್ ಎಗ್ಸಾಮಿನೇಷನ್ಗೆ ದಿನಾಂಕ ನಿಗದಿಯಾಗಲಿದೆ. ನಿಗದಿತ ದಿನದಂದು ಆರೋಪಿಗಳ ಪರ ವಕೀಲರು ಪ್ರದೋಷ್ ಅವರನ್ನು ಕ್ರಾಸ್ ಎಗ್ಸಾಮಿನೇಷನ್ ಮಾಡಲಿದ್ದಾರೆ.
ಇದೇ ವೇಳೆ, ಎವಿಡೆನ್ಸ್ ಆಕ್ಟ್ಗೆ ಸಂಬಂಧಿಸಿದಂತೆ ಇಂದು 59ನೇ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ. ಎವಿಡೆನ್ಸ್ ಆಕ್ಟ್ನ 137 ಮತ್ತು 138ನೇ ಸೆಕ್ಷನ್ಗಳಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಮಾಫಿ ಸಾಕ್ಷ್ಯ ಹೇಳಿಕೆ ದಾಖಲಿಸುವ ವೇಳೆ ಪ್ರದೋಷ್ ಅವರು ಕೆಲವು ಮಾಹಿತಿಯನ್ನು ಮರೆತಿದ್ದ ಹಿನ್ನೆಲೆಯಲ್ಲಿ, ಮರುದಿನ ಮತ್ತೆ ಹೇಳಿಕೆ ದಾಖಲಿಸಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರದೋಷ್ ಅವರಿಗೆ ಯಾರೋ ಹೇಳಿಕೊಟ್ಟು ಪದೇಪದೇ ಹೇಳಿಕೆ ದಾಖಲಿಸಲಾಗುತ್ತಿದೆ. ಇಂತಹ ಹೇಳಿಕೆಯನ್ನು ಕೋರ್ಟ್ ದಾಖಲಿಸಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು.
ಎವಿಡೆನ್ಸ್ ಆಕ್ಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ಇಂದು 59ನೇ ಸೆಷನ್ಸ್ ಕೋರ್ಟ್ ತನ್ನ ಆದೇಶ ಪ್ರಕಟಿಸಲಿದೆ.



