ವಿಜಯಸಾಕ್ಷಿ ಸುದ್ದಿ, ಡಂಬಳ: ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಬೆಳೆ ಸಾಲ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮಡಿ ಆಗ್ರಹಿಸಿದರು.
ಡಂಬಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ರೈತರಿಗೆ ಬಡ್ಡಿರಹಿತ ಬೆಳೆ ಸಾಲ ಒದಗಿಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಂಗಾರು ಆರಂಭದಲ್ಲಿ ಅಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಬಿತ್ತನೆ ಕೈಗೊಂಡಿದ್ದರು. ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿ ಸಂಪೂರ್ಣ ಹಾನಿಯಾಗಿವೆ. ಬಿತ್ತನೆ ಅವಧಿ ಮುಗಿಯುತ್ತಿದ್ದರೂ ಅಗತ್ಯ ಮಳೆಯಾಗದ ಕಾರಣ ರೈತರು ಜಮೀನು ಹರಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಳೆ ಕೊರತೆಯಿಂದ ಬಹುತೇಕ ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಲಭ್ಯವಿರುವ ನೀರಿನಿಂದ ಕೃಷಿ ಮಾಡುವುದು ಕಷ್ಟವಾಗಿದ್ದು, ಡೀಸೆಲ್ ದರ ಹೆಚ್ಚಳದಿಂದ ಟ್ರ್ಯಾಕ್ಟರ್‌ಗಳ ಬಾಡಿಗೆಯೂ ಏರಿಕೆಯಾಗಿದೆ. ಕೃಷಿಗೆ ಅಗತ್ಯವಿರುವ ಬಹುತೇಕ ವಸ್ತುಗಳ ಬೆಲೆ ಹೆಚ್ಚಳದಿಂದ ರೈತರು ಹಾಕಿದ ಬಂಡವಾಳವೂ ವಾಪಸ್ ಪಡೆಯಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.
ರೋಣ ಕ್ಷೇತ್ರದಲ್ಲಿ ಈ ಹಿಂದೆ ಬೆಳೆದಿದ್ದ ಕೆಂಪು ಮೆಣಸಿನಕಾಯಿಗೆ ವಿಮಾ ಸೌಲಭ್ಯ ಘೋಷಣೆಯಾಗಿಲ್ಲ. ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂಡರಗಿ ತಾಲೂಕು ಸೇರಿದಂತೆ ಇಡೀ ಗದಗ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು. ಕೃಷಿ ಕಾರ್ಮಿಕರಿಗೆ ಬರ ಪರಿಹಾರ ಕಾಮಗಾರಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ರೈತರ ಸಾಲ ಮನ್ನಾ ಹಾಗೂ ಅಗತ್ಯ ಪರಿಹಾರ ಕಲ್ಪಿಸಲು ಸಂಸದರು, ಉಸ್ತುವಾರಿ ಸಚಿವರು ಹಾಗೂ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯಲ್ಲಪ್ಪಗೌಡ ಕರಮಡಿ ಒತ್ತಾಯಿಸಿದರು.



