ಬೀದರ್: ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಆರೋಪದ ಪ್ರಕರಣ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಸುದರ್ಶನ ರಟಕಲ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂಬ ಐವರು ಆರೋಪಿಗಳನ್ನು ಭಾಲ್ಕಿ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾಲ್ಕಿ ಪಟ್ಟಣದ ಮಾಸುಮಪಾಶಾ ಕಾಲೋನಿಯಿಂದ ಸುದರ್ಶನನನ್ನು ಐವರು ಆರೋಪಿಗಳು ಅಪಹರಿಸಿದ್ದರು ಎನ್ನಲಾಗಿದೆ. ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂತರ ಮೃತದೇಹವನ್ನು ಕಡ್ಯಾಳ ಗ್ರಾಮದ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಹಾಗೂ ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದರ್ಶನನ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಭಾಲ್ಕಿ ನಗರ ಪೊಲೀಸರು ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣ ಮತ್ತು ಕೊಲೆಗೆ ನಿಖರ ಕಾರಣವೇನು? ಪ್ರಕರಣದ ಹಿಂದಿನ ಉದ್ದೇಶವೇನು? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



