ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ಕಸಿ ಮಾಡಿಸಿಕೊಂಡವರು ಹಾಗೂ ಅಂಗಾಂಗ ದಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮತ್ತು ಅಂಗಾಂಗ ದಾನದ ಕುರಿತು ಸಮಾಜದಲ್ಲಿರುವ ಭಯ, ತಪ್ಪು ಕಲ್ಪನೆಗಳನ್ನು ನಿವಾರಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆ.16ರಂದು ಗದಗದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಗದಗ್ ಟ್ರಾನ್ಸ್ಪ್ಲಾಂಟ್ ಗೇಮ್ಸ್-2026 ಆಯೋಜಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್, ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಎಚ್.ಕೆ. ಪಾಟೀಲ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂಗಾಂಗ ಕಸಿ ಬಳಿಕವೂ ವ್ಯಕ್ತಿ ಸಾಮಾನ್ಯ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವುದು ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದರು.
ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗ ಕಸಿ ಮಾಡಿಸಿಕೊಂಡವರು, ಅಂಗಾಂಗ ದಾನಿಗಳು ಹಾಗೂ ಡಯಾಲಿಸಿಸ್ನಲ್ಲಿರುವವರನ್ನು ಒಂದೇ ವೇದಿಕೆಗೆ ಕರೆತಂದು ಕ್ರೀಡಾಕೂಟ ಆಯೋಜಿಸಲಾಗಿದೆ. ವೈದ್ಯರ ಸಲಹೆಯಂತೆ ಕಸಿ ಮಾಡಿಸಿಕೊಂಡವರು ದೈಹಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗದ ರೀತಿಯಲ್ಲಿ ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್ನ ಡಾ. ಅವಿನಾಶ ಓದುಗೌಡ್ರ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಗಾಂಗ ಕಸಿ ಮಾಡಿಸಿಕೊಂಡವರು ಹಾಗೂ ದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಿಂದ ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿಯೊಬ್ಬರೂ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸುಮಾರು 75 ಮಂದಿ ನೋಂದಣಿ ಮಾಡಿಕೊಂಡಿದ್ದು, ಆನ್ಸ್ಪಾಟ್ ನೋಂದಣಿಯೊಂದಿಗೆ 75ರಿಂದ 100 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಟ್ರಾನ್ಸ್ಪ್ಲಾಂಟ್ ಗೇಮ್ಸ್ನಲ್ಲಿ 100 ಮೀ., 200 ಮೀ. ವಾಕಿಂಗ್, ರನ್ನಿಂಗ್, 400 ಮೀ. ವಾಕ್, ಶಾಟ್ಪುಟ್, ಡಿಸ್ಕಸ್ ಥ್ರೋ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ಯಾರಂ, ಟಗ್ ಆಫ್ ವಾರ್ ಹಾಗೂ ಮ್ಯೂಸಿಕಲ್ ಚೇರ್ನಂತಹ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಡಯಾಲಿಸಿಸ್ನಲ್ಲಿರುವವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಸೂಕ್ತವಾಗುವ ಲಘು ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಗಳಲ್ಲಿ ಡೋನರ್, ರಿಸಿಪಿಯೆಂಟ್ ಹಾಗೂ ಡಯಾಲಿಸಿಸ್ ರೋಗಿಗಳೆಂದು ಮೂರು ಪ್ರಮುಖ ವಿಭಾಗಗಳನ್ನು ಮಾಡಲಾಗಿದ್ದು, ವಯಸ್ಸಿನ ಆಧಾರದಲ್ಲಿಯೂ ವರ್ಗೀಕರಣ ಮಾಡಲಾಗಿದೆ ಎಂದು ಡಾ. ಅವಿನಾಶ ಓದುಗೌಡ್ರ ತಿಳಿಸಿದರು.
ಅಂಗಾಂಗ ದಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯ ಸುಮಾರು 150 ಶಾಲೆಗಳಲ್ಲಿ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಂತಿಮವಾಗಿ ಭಾಷಣ ಸ್ಪರ್ಧೆಯಲ್ಲಿ 10 ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಆ.16ರಂದು ನಡೆಯುವ ಟ್ರಾನ್ಸ್ಪ್ಲಾಂಟ್ ಗೇಮ್ಸ್ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಆನಂದ ಪೋತ್ನೀಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಮಂದಾಲಿ, ಡಾ. ಪವನ್ ಕುರಹಟ್ಟಿ, ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್ ಹಾಗೂ ಕೆ.ಎಚ್. ಪಾಟೀಲ ಆಸ್ಪತ್ರೆಯ ವೈದ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಅಂಗಾಂಗ ಕಸಿ ಮಾಡಿಸಿಕೊಂಡವರು ಸಹ ಸಾಮಾನ್ಯ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಅಂಗಾಂಗ ದಾನದ ಕುರಿತು ಜನರಲ್ಲಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಟ್ರಾನ್ಸ್ಪ್ಲಾಂಟ್ ಗೇಮ್ಸ್ನ ಉದ್ದೇಶ.”
— ಕೃಷ್ಣಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ



