ವಾಷಿಂಗ್ಟನ್: ಅಮೆರಿಕದ ಮ್ಯಾಸಚುಸೆಟ್ಸ್‌ನಲ್ಲಿ ಭಾರತೀಯ ಮೂಲದ ಯುವಕನೊಬ್ಬ ತನ್ನ ತಾಯಿ ಹಾಗೂ ತಮ್ಮನನ್ನು ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.
ಕೊಲೆ ಮಾಡಲು ಸಂಚು ರೂಪಿಸುವ ಸಂದರ್ಭದಲ್ಲಿ ಆತ ಇಂಟರ್ನೆಟ್ ಹಾಗೂ ChatGPT ಸೇರಿದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬೋಸ್ಟನ್‌ನಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಆಕ್ಟನ್‌ನ ಮಾರ್ತಾ ಲೇನ್‌ನ ಮನೆಯೊಂದರಲ್ಲಿ ಆಗಸ್ಟ್ 11ರಂದು ಈ ಘಟನೆ ನಡೆದಿದೆ. ಆಕ್ಟನ್ ನಿವಾಸಿ ಅರ್ಜುನ್ ಅರವಿಂದ್ ಆರೋಪಿಯಾಗಿದ್ದು, ಆತನ ತಾಯಿ ಸುಧಾ ವೆಂಕಟೇಶನ್ (45) ಹಾಗೂ ತಮ್ಮ ಸಿದ್ಧಾರ್ಥ್ ಅರವಿಂದ್ (14) ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಆಕ್ಟನ್‌ನ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಅರ್ಜುನ್ ಮನೆಯಲ್ಲೇ ತನ್ನ ತಾಯಿ ಮತ್ತು ತಮ್ಮನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ತಾಯಿಯ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ನಡೆದ ದಿನ ಸಂಜೆ 6:30ರ ಸುಮಾರಿಗೆ ಟ್ಯೂಷನ್ ಶಿಕ್ಷಕರೊಬ್ಬರು ಮನೆಗೆ ಬಂದಿದ್ದರು. ಹಲವು ಬಾರಿ ಬಾಗಿಲು ತಟ್ಟಿದರೂ ಯಾರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅವರು ಅರ್ಜುನ್ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರನ್ನು ಸಂಪರ್ಕಿಸಲು ತಂದೆ ಹಲವು ಬಾರಿ ಪ್ರಯತ್ನಿಸಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಆತಂಕಗೊಂಡ ಅವರು ಆಕ್ಟನ್ ಪೊಲೀಸರನ್ನು ಸಂಪರ್ಕಿಸಿ ಮನೆಯವರ ಸುರಕ್ಷತೆ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದರು.
ಮಾಹಿತಿ ಪಡೆದ ಪೊಲೀಸರು ತಕ್ಷಣ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ನೆಲಮಾಳಿಗೆಯಲ್ಲಿ ಸುಧಾ ವೆಂಕಟೇಶನ್ ಅವರ ಮೃತದೇಹ ಹಾಗೂ ಮೊದಲ ಮಹಡಿಯಲ್ಲಿ ಸಿದ್ಧಾರ್ಥ್ ಅರವಿಂದ್ ಅವರ ಮೃತದೇಹ ಪತ್ತೆಯಾಗಿದೆ. ಇಬ್ಬರ ಮೃತದೇಹಗಳ ಮೇಲೂ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಅರ್ಜುನ್ ನಾಪತ್ತೆಯಾಗಿದ್ದ. ಆತ ಬಳಸಿದ್ದ ಕಾರಿನೊಂದಿಗೆ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಬಳಿಕ ವೇಲ್ಯಾಂಡ್‌ನ ಪಾರ್ಕಿಂಗ್ ಸ್ಥಳವೊಂದರಲ್ಲಿ ಕಾರು ಪತ್ತೆಯಾಗಿದೆ. ಕಾರಿನೊಳಗಿದ್ದ ಅರ್ಜುನ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಯ ವೇಳೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಲು ಅರ್ಜುನ್ ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕಿದ್ದಾನೆ ಹಾಗೂ ChatGPT ಬಳಸಿದ್ದಾನೆ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.
ಸದ್ಯ ಅರ್ಜುನ್ ವಿರುದ್ಧ ಎರಡು ಕೊಲೆ ಪ್ರಕರಣಗಳು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ವಿಚಾರಣೆಗಾಗಿ ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.



