ಬೆಂಗಳೂರು: ವೇದಿಕೆ ಮೇಲೆ ಬಿ.ಎಸ್. ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಭಾಷಣ ಮಾಡಿದಾಗ ಕ್ರಮ ಕೈಗೊಳ್ಳದವರು, ಈಗ ನನ್ನ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದು ಯಾಕೆ ಎಂದು ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನಿಂದ ತನ್ನನ್ನು ಅಮಾನತು ಮಾಡಿದ ಬಳಿಕ ಪ್ರತಿಕ್ರಿಯಿಸಿದ ಅವರು, “ನನಗೆ ಇನ್ನೂ ಅಮಾನತು ಪತ್ರ ಬಂದಿಲ್ಲ. ನಿಮ್ಮಿಂದಲೇ ಈ ವಿಚಾರ ಕೇಳುತ್ತಿದ್ದೇನೆ. ಅಧಿಕೃತ ಆದೇಶ ಬಂದ ಬಳಿಕ ಸೂಕ್ತ ಉತ್ತರ ನೀಡುತ್ತೇನೆ. ನನ್ನ ವಿರುದ್ಧ ಯಾವುದೇ ಆಡಿಯೋ ಅಥವಾ ವಿಡಿಯೋ ಇದ್ದರೆ ಅದನ್ನು ಸಾರ್ವಜನಿಕವಾಗಿ ತೋರಿಸಬೇಕಲ್ಲ. ಯಾವ ಆಧಾರದಲ್ಲಿ ಅಮಾನತು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನನಗೆ ಅನಿಸುವುದಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ, ಮತ್ತೊಬ್ಬರು ಸಂಸದರಾಗಿದ್ದಾರೆ. ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದೇವೆ” ಎಂದು ಹೇಳಿದರು.
“ನನಗೆ ಯಾರೂ ಪ್ರಚಾರಕ್ಕೆ ಬರಲು ಹೇಳಲಿಲ್ಲ. ಅಭ್ಯರ್ಥಿ ಅಥವಾ ಅವರ ಕುಟುಂಬದವರು ಕೂಡ ಸಂಪರ್ಕಿಸಿಲ್ಲ. ಆದ್ದರಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೂ ಹೋಗಿಲ್ಲ. ನನ್ನನ್ನು ಪ್ರಚಾರಕ್ಕೆ ಕರೆಯಲೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ವಯಂ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. “ಅಧ್ಯಕ್ಷರು ಅಂದಮೇಲೆ ಏನು ಅಶಿಸ್ತು ಎಂಬುದನ್ನು ಸ್ಪಷ್ಟಪಡಿಸಬೇಕಲ್ಲ” ಎಂದು ಅವರು ಹೇಳಿದರು.



