ಕಚೇರಿಗೆ ಗೈರಾದರೆ ಕ್ರಮ, ಮೂಲಸೌಲಭ್ಯಕ್ಕೆ ಆದ್ಯತೆ: ಸಮಸ್ಯೆಪರಿಹರಿಸುವುದಾಗಿ ಜಿ.ಪಂ. ಸಿಇಒ ಭರವಸೆ

0
Spread the love

ಅಭಿವೃದ್ಧಿ ಮರೆತ ಚಿಂಚಲಿ, ಭಾಗ-4

Advertisement

ಅಧಿಕಾರಿ, ಜನಪ್ರತಿನಿಧಿಗಳ ಉತ್ತಮ ಸ್ಪಂದನೆ- ಇನ್ನೆರಡು ದಿನಗಳಲ್ಲಿ ಸಮಸ್ಯೆಗಳಿಗೆ ಇತಿಶ್ರೀ?

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಮೂರು ದಿನಗಳಿಂದ ‘ವಿಜಯಸಾಕ್ಷಿ’ ‘ಅಭಿವೃದ್ಧಿ ಮರೆತ ಚಿಂಚಲಿ ಎಂಬ ಅಡಿಬರಹದಲ್ಲಿ ಅಧಿಕಾರಿಗಳ ಕಾರ್ಯ ವೈಖರಿ, ಮೂಲಸೌಲಭ್ಯಗಳ ಕೊರತೆ, ಅಧಿಕಾರಿಗಳ ಮೇಲಿನ ದಬ್ಬಾಳಿಕೆ ಹೀಗೆ ಹತ್ತು ಹಲವು ಸಮಸ್ಯೆಗಳ ಹೂರಣದ ಕುರಿತು ಸರಣಿ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಂಚಲಿ ಗ್ರಾಮ ಪಂಚಾಯತಿಯಲ್ಲಿರುವ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

‘ವಿಜಯಸಾಕ್ಷಿ’ಗೆ ಪ್ರತಿಕ್ರಿಯೆ ನೀಡಿರುವ ಜಿಪಂ ಸಿಇಒ ಡಾ| ಆನಂದ ಕೆ. ಅವರು, ಚಿಂಚಲಿ ಗ್ರಾ.ಪಂ.ನ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಶೀಘ್ರವೇ ಪರಿಹರಿಸುವಂತೆ ಗದಗ ತಾ.ಪಂ. ಇಒ ಅವರಿಗೆ ಸೂಚಿಸಲಾಗುವುದು. ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯವಾಗಿರುವಂತೆ ಪಿಡಿಒಗೆ ಎಚ್ಚರಿಕೆ ನೀಡಲಾಗುವುದು. ಒಂದು ವೇಳೆ ಕಚೇರಿಗೆ ಸರಿಯಾಗಿ ಬಾರದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನೆಟ್ವರ್ಕ್ ಸರಿಯಿಲ್ಲ

ಚಿಂಚಲಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿಗಳು ಜನರ ಕೈಗೆ ಸರಿಯಾಗಿ ಸಿಗುತ್ತಿಲ್ಲ. ಇಂಟರ್‌ನೆಟ್ ಇಲ್ಲವೆಂಬ ಕುಂಟು ನೆಪವೊಡ್ಡಿ ಗದಗ ನಗರಕ್ಕೆ ಹೋಗುತ್ತಿದ್ದಾರೆ ಎಂಬ ಆರೋಪದ ಕುರಿತು ತಾ.ಪಂ. ಇಒ ಜಿನಗಾ ಅವರು ಪ್ರತಿಕ್ರಿಯೆ ನೀಡಿದ್ದು, ಬಿಎಸ್ಸೆನ್ನೆಲ್, ಬಿಬಿಎನ್ನೆಲ್ ವರ್ಕ್ ಆಗುತ್ತಿಲ್ಲ. ಡಾಂಗಲ್ ಹಾಕಿ ಕೆಲಸ ಮಾಡುತ್ತಿದ್ದಾರೆ. ಸುಮಾರು 4-5 ಪಂಚಾಯತಿಗಳಲ್ಲೂ ಬಿಬಿಎನ್ನೆಲ್ ನೆಟ್‌ವರ್ಕ್ ಕೆಲಸ ಮಾಡುತ್ತಿಲ್ಲ. ಈ ಕುರಿತು ಬಿಎಸ್ಸೆನ್ನೆಲ್‌ಗೆ ಪತ್ರ ಕೊಟ್ಟಿದ್ದೇವೆ. ಸದ್ಯ ನಮ್ಮದೇ ಡಾಂಗಲ್ ಹಾಕಿ ಕೆಲಸ ಮಾಡುತ್ತಿದ್ದು, ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಯುವಕರ ಮೇಲೆ ಭರವಸೆ

ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಚಿಂಚಲಿ ಗ್ರಾ.ಪಂ.ಗೆ ಯುವಕರೇ ಹೆಚ್ಚಾಗಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರು ಹದಗೆಟ್ಟಿರುವ ಪಂಚಾಯತಿ ಆಡಳಿತದಲ್ಲಿ ವಿನೂತನ ಬದಲಾವಣೆ ತರುತ್ತಾರೆಂಬ ಭರವಸೆಯನ್ನು ಜನರು ಇಟ್ಟುಕೊಂಡಿದ್ದಾರೆ. ಆದರೆ, ನೂತನ ಗ್ರಾಪಂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಳಿ ತಪ್ಪಿದ ಆಡಳಿತವನ್ನು ಸರಿ ದಾರಿಗೆ ತರುವರೇ? ಅಭಿವೃದ್ಧಿ ಪರ ಕೆಲಸಗಳನ್ನು ಮಾಡುವರೇ? ಎಂಬ ಪ್ರಶ್ನೆ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಭವಿಸಿದೆ.

ಇನ್ನೆರಡು ದಿನಗಳಲ್ಲಿ ಪರಿಹಾರ!

ಚಿಂಚಲಿ ಗ್ರಾಪಂ ಪಿಡಿಒ ಎಸ್.ಎಸ್. ತೊಂಡಿಹಾಳ ಅವರಿಗೆ ತಾಪಂ ಇಒ ಜಿನಗಾ ಅವರು ಕಾನ್ಫರೆನ್ಸ್ ಕರೆ ಮಾಡಿ, ಶೀಘ್ರವೇ ಚಿಂಚಲಿ ಪಂಚಾಯತಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಬಿಬಿಎನ್ನೆಲ್ ನೆಟ್‌ವರ್ಕ್ ಸ್ಥಗಿತಗೊಂಡಿದ್ದು, ಸದ್ಯ ಮೊಬೈಲ್‌ನಲ್ಲಿ ಕೆಲಸ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಪ್ರತಿಯೊಂದನ್ನೂ ಪಂಚಾಯತಿ ವ್ಯಾಪ್ತಿಯಲ್ಲೇ ತೆಗದುಕೊಡುವಂತೆ ಕ್ರಮ ಕೈಗೊಳ್ಳುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿದ್ದರೆ ಪಂಚಾಯತಿಯ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ. ಹಾಗಾಗಿ ಪಿಡಿಒಗಳಿಗೆ ಕಚೇರಿಯಲ್ಲಿ ಲಭ್ಯವಿರುವಂತೆ ಸಂಬಂಧಿಸಿದ ತಾಪಂ ಇಒ ಅವರಿಗೆ ಸೂಚನೆ ನೀಡಲಾಗುವುದು.

ಡಾ|ಆನಂದ ಕೆ., ಜಿಪಂ ಸಿಇಒ

ಒಳ್ಳೆಯ ಪಿಡಿಒ ಅವರನ್ನೇ ತಂದು ಹಾಕಿದ್ದೇವಲ್ರಿ?

ಹನಮಂತಪ್ಪ ಪೂಜಾರ, ಜಿ.ಪಂ ಸದಸ್ಯ

ಹಲವು ವರ್ಷಗಳಿಂದ ಚಿಂಚಲಿ ಗ್ರಾಪಂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಜನರು ಬೇಸತ್ತಿದ್ದಾರೆ. ಒಂದೇ ಕೆಲಸಕ್ಕೆ ನೂರೆಂಟು ಬಾರಿ ಅಲೆದಾಡಿ ಸುಸ್ತಾಗಿದ್ದಾರೆ. ಹಾಗಾಗಿ, ಪಂಚಾಯತಿ ಮಟ್ಟದಲ್ಲೇ ಪ್ರತಿಯೊಂದು ಸಮಸ್ಯೆಗೂ ಶೀಘ್ರವೇ ಪರಿಹಾರ ಸಿಗುವಂತೆ ನೋಡಿಕೊಳ್ಳಲಾಗುವುದು. ಅಲ್ಲದೇ, ಮೂರು ಹಳ್ಳಿಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು.

ಚಂದ್ರಶೇಖರ ಆರ್, ಹರಿಜನ, ಮುತ್ತು ರಾಮರಡ್ಡಿ, ಗ್ರಾ.ಪಂ ಸದಸ್ಯರು ಚಿಂಚಲಿ

Spread the love

LEAVE A REPLY

Please enter your comment!
Please enter your name here