21.4 C
Gadag
Wednesday, September 27, 2023

ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ; ಕಾಂಗ್ರೆಸ್-ಬಿಜೆಪಿ ಮುಖಂಡರ “ಜಗಳ್ ಬಂಧಿ!”

Spread the love

ಪರಣ್ಣ ಅಧಿಕಾರದಲ್ಲಿದ್ದಾಗೆಲ್ಲ ರೌಡಿಸಂ ಮಾಡ್ತಾರೆ: ಅನ್ಸಾರಿ

ಬಾಂಬೆ ನಂಟು ಸಾಬೀತಾದರೆ ರಾಜಕೀಯ ನಿವೃತ್ತಿ: ಪರಣ್ಣ

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯನನ್ನು ಬಿಜೆಪಿ ಕಾರ್ಯಕರ್ತರು ಅಪಹರಿಸಿ, ಸಿಕ್ಕಿ ಬಿದ್ದಿದ್ದಾರೆ.

ಗಂಗಾವತಿಯ ಬಾರ್ ಆ್ಯಂಡ್‌ ರೆಸ್ಟೋರೆಂಟ್‌‌ನಿಂದ ಅಕ್ಟೋಬರ್ 29ರ‌ ರಾತ್ರಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಅವರನ್ನು ‌ಬಿಜೆಪಿಯ ಮೂವರು ಸದಸ್ಯರು ಸೇರಿದಂತೆ ಹಲವರು ಅಪಹರಿಸಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ‌ದಾಖಲಾಗಿದೆ.

ನಾಲ್ಕೈದು ಯುವಕರು ಸದಸ್ಯ ಮನೋಹರ ಸ್ವಾಮಿ ಅವರನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡೆಸಿರುವ ಗಂಗಾವತಿ ಪೊಲೀಸರು ಉತ್ತರ ಕನ್ನಡ‌ ಜಿಲ್ಲೆ‌ ಹಳಿಯಾಳ‌ ಪೊಲೀಸರ ಸಹಾಯದೊಂದಿಗೆ ನಗರಸಭೆ ಸದಸ್ಯ ಮತ್ತು ಮೂವರು ಅಪಹರಣಕಾರರನ್ನು ವಶಕ್ಕೆ ಪಡೆದಿದ್ದಾರೆ.

ಚುನಾವಣೆ ಹಾಲಿ- ಮಾಜಿ ಶಾಸಕರಿಗೆ ಪ್ರತಿಷ್ಠೆಯಾಗಿದ್ದು, ದಿನಕ್ಕೊಂದು ಹೈಡ್ರಾಮಾಕ್ಕೆ ವೇದಿಕೆ ಆಗಿದೆ.

ನವೆಂಬರ್ 2ಕ್ಕೆ ನಿಗದಿಯಾಗಿರೋ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು‌ ಕೈ-ಕಮಲ ಪಾಳೆಯ ಎಲ್ಲಿಲ್ಲದ ಕಸರತ್ತು ಮಾಡುತ್ತಿವೆ.
ಒಟ್ಟೂ 35 ಸದಸ್ಯ ಬಲದ ಗಂಗಾವತಿ ನಗರಸಭೆಯಲ್ಲಿ ಬಿಜೆಪಿಯ 14, ಇಬ್ಬರು ಪಕ್ಷೇತರ ಮತ್ತು ಒಬ್ಬ ಜೆಡಿಎಸ್ ಸದಸ್ಯನ ಜೊತೆಗೆ ಶಾಸಕ, ಸಂಸದರ ವೋಟ್ ನೊಂದಿಗೆ ಅಧಿಕಾರ ಹಿಡಿಯುವ ಕನಸು ಕಂಡಿತ್ತು. ಆದರೆ, ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಒಳ ಒಪ್ಪಂದದ ಹಿನ್ನೆಲೆ ‌ಅಜ್ಞಾತ‌ ಸ್ಥಳಕ್ಕೆ ತೆರಳಿದ್ದಾರೆ.

ಇದರಿಂದ ಸದಸ್ಯೆ ಮನೆಯವರು ಕಾಂಗ್ರೆಸ್ ‌ಮುಖಂಡರ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಆದರೆ, ಸ್ವತಃ ಸದಸ್ಯೆ ಮತ್ತು ಆಕೆಯ ಪತಿ‌ ಸೋಮನಾಥ ನಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು.

ಬಿಜೆಪಿ ಸೇಡು!
ತಮ್ಮ ಸದಸ್ಯರನ್ನು ತಮ್ಮತ್ತ ಸೆಳೆದ ರಿವೆಂಜ್ ಮತ್ತು ಅಧಿಕಾರ ‘ಕೈ’ ಪಾಲಾಗಬಹುದು ಎಂಬ ಆತಂಕದಿಂದ ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ‌ಸದಸ್ಯನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಣ ಮಾಡಿದ್ದಾರೆ. ಹೀಗೆ ಅಪಹರಿಸಿ ಚುನಾವಣೆ ಮುಗಿಯುವವರೆಗೂ ಅಜ್ಞಾತ ಸ್ಥಳದಲ್ಲಿ‌ ಇಟ್ಟು, ‌ಚುನಾವಣೆ ಸಭೆಗೆ ಗೈರು ಮಾಡಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಆದರೆ, ಪೊಲೀಸ್ ವ್ಯವಸ್ಥೆ, ಕಾನೂನು ಇದೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸಿರೋ ಬಿಜೆಪಿ ಪಾಳೆಯದ ಕೆಲಸ ನಗೆಪಾಟಲಿಗೆ‌ ಎಡೆ ಮಾಡಿದೆ.

ಇಕ್ಬಾಲ್ ಅನ್ಸಾರಿ

ಬಿಜೆಪಿಯವರು ಗಂಗಾವತಿ ನಗರಸಭೆಯ ನಮ್ಮ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿಯವರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮುಖಕ್ಕೆ, ಕಣ್ಣಿಗೆ ಸ್ಪ್ರೇ ಮಾಡಿ, ಕೈ ಕಟ್ಟಿ, ಎದೆಗೆ ಒದ್ದು ಹೊತ್ತೊಯ್ದಿದ್ದಾರೆ. ಇದು ಬಿಜೆಪಿ ಸಂಸ್ಕೃತಿ
-ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರು, ಗಂಗಾವತಿ

ಗೂಂಡಾಗಿರಿ ಮಾಡಲು‌ ನಮಗೂ ಬರುತ್ತೆ. ಆದರೆ ಅದು ಕಾಂಗ್ರೆಸ್ ಸಂಸ್ಕೃತಿಯೂ ಅಲ್ಲ. ಬಿಜೆಪಿಯವರಿಗೆ ತಾಕತ್ತಿದ್ದರೆ ಮನೋಹರಸ್ವಾಮಿ ಮನವೊಲಿಸಿ ಕರೆದುಕೊಂಡು ಹೋಗಲಿ‌ ನೋಡೋಣ.
-ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.

ಪರಣ್ಣ ಮುನವಳ್ಳಿ

ನನಗೆ ಬಾಂಬೆ ನಂಟು ಇದೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ವ್ಯಾಪಾರದ ದೃಷ್ಟಿಯಿಂದ ಬಾಂಬೆ ಪರಿಚಯವೇ ಹೊರತು ರೌಡಿಸಂನಿಂದಲ್ಲ. ಅಕ್ರಮ ವ್ಯವಹಾರ ಮಾಡುವವರಿಗೆ ಬಾಂಬೆ ಗೂಂಡಾಗಳ ಪರಿಚಯ ಇರುತ್ತೆ. ಅದಕ್ಕೆ ಮಾತಾಡ್ತಾರೆ. ಗಂಗಾವತಿ ನಗರಸಭೆ ಬಿಜೆಪಿ ಮಡಿಲಿಗೆ ಸೇರುವುದು ನಿಶ್ಚಿತ. ನಾವು ಯಾರನ್ನು ಕಿಡ್ನ್ಯಾಪ್ ಮಾಡಿಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!