ರಾತ್ರಿಯಿಡೀ ಸುರಿದ ಭಾರೀ ಮಳೆ; ಮನೆಗೆ ನುಗ್ಗಿದ ಚರಂಡಿ ನೀರು, ಜಲಾವೃತಗೊಂಡ ಬಡಾವಣೆ, ನಗರಸಭೆ ವಿರುದ್ಧ ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಮಧ್ಯರಾತ್ರಿಯಿಂದ ಗದಗ-ಬೆಟಗೇರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಅವಾಂತರ ಸೃಷ್ಟಿ ಆಗಿದ್ದು, ಒಂದು ಕಡೆ ಚರಂಡಿ ನೀರು ಮನೆಗೆ ನುಗ್ಗಿದರೇ, ಇನ್ನೊಂದು ಕಡೆ ರಾಜ ಕಾಲುವೆಯ ನೀರು ಮನೆಗೆ ನುಗ್ಗಿ ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಲ್ಲಿ ತೇಲಾಡುತ್ತಿರುವ ಪ್ರಸಂಗ ನಡೆದಿದೆ.

ಗದಗದ ಗಂಗಿಮಡಿ, ಮುಳಗುಂದ ನಾಕಾದ ಕೆಇಬಿ ಬಳಿ ಹಾಗೂ ಬೆಟಗೇರಿಯ ನಾಲ್ಕನೇ ವಾರ್ಡ್ ನ ಮಂಜುನಾಥ್ ನಗರದ ವಾಲ್ಮೀಕಿ ಅಂಬೇಡ್ಕರ್ ಬಡಾವಣೆಯಲ್ಲಿ ರಾತ್ರಿ ಮೂರು ಗಂಟೆಗೆ ‌ಮನೆಗೆ ಏಕಾಏಕಿ ನುಗ್ಗಿದ ರಾಜ ಕಾಲುವೆಯ ನೀರಿನಿಂದಾಗಿ‌ ಗಾಬರಿಬಿದ್ದ ಜ‌ನ ನೀರು ಮನೆಯಿಂದ ಹೊರಗಡೆ ಹಾಕಲು ಹರಸಾಹಸ ನಡೆಸಿದರು. ಆದರೆ ಅಷ್ಟರಲ್ಲೇ ಇಡೀ ಏರಿಯಾ ನೀರಿನಿಂದ ಜಲಾವೃತಗೊಂಡಿತು. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇಡೀ ಬಡಾವಣೆ ಮೊಳಕಾಲುದ್ದದ ನೀರು ನಿಂತ ಹೈರಾಣಾಗಿದ್ದರು. ಆಗೆಲ್ಲಾ ಭೇಟಿ ನೀಡಿದ ಶಾಸಕ‌ ಎಚ್ ಕೆ ಪಾಟೀಲ್ ಹಾಗೂ ನಗರಸಭೆ ಅಧಿಕಾರಿಗಳು, ರಾಜ ಕಾಲುವೆ ದುರಸ್ತಿಗೊಳಿಸಿ ಎತ್ತರಕ್ಕೆ ಕಟ್ಟಿಸಿ ಇಂತಹ ಸಮಸ್ಯೆ ಎದುರಾಗದಂತೆ‌ ನೋಡಿಕೊಳ್ಳುವುದಾಗಿ ಬರವಸೆ ನೀಡಿದ್ದರು.

ಆದರೆ ಇದುವರೆಗೂ ಇಲ್ಲಿ ಯಾವುದೇ ಕಾಮಗಾರಿ ನಡೆಯದೆ ಇರುವುದಕ್ಕೆ ಮತ್ತೊಮ್ಮೆ ಇಂತಹ ಅವಾಂತರ ಸೃಷ್ಟಿ ಮಾಡಿದೆ ಎಂದು ಬಡಾವಣೆಯ ಲಕ್ಷ್ಮಣ್ಣ ವಾಲ್ಮೀಕಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದರು.

ನರಸಾಪೂರದ ಪೆಟ್ರೋಲ್ ಬಂಕ್ ಬಳಿಯೂ ಮಳೆ ನೀರು ನಿಂತು ಜಲಾವೃತಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದ್ದು, ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗದಗನ ಎಪಿಎಂಸಿ ವಸತಿಗೃಹದ ಮುಂದೆಯೂ ಮಳೆ ನೀರು ನಿಂತಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಕಾಮಗಾರಿ ಮಾಡದೇ ಇರುವುದರಿಂದ ನೀರು ಹೊರ ಹೋಗದೆ ಜಲಾವೃತಗೊಂಡಿದೆ. ಮನೆಯಿಂದ ಹೊರಬರಲೂ ಹರಸಾಹಸಪಡಬೇಕಾಗಿದ್ದು, ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here