- ಕಟ್ಟಡ ಮಾಲೀಕರ ಅಕ್ರಮದಲ್ಲಿ ಪ್ರಭಾವಿಗಳು ಶಾಮೀಲು?
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗವಾಗಿರುವ ಪಾಲಾ ಬಾದಾಮಿ ರಸ್ತೆಯ ಪಕ್ಕದ ರಿಜಿಸ್ಟರ್ ಸರ್ವೆ ನಂ. 6706/75ಎ ದಿಂದ 22/2ಎ1 ನೇದ್ದರಲ್ಲಿ ಸರ್ಕಾರದ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ದಲಿಚಂದ ಮೇಘರಾಜ ಕೋಠಾರಿ ಸಹಿತ 31 ಮಾಲೀಕರು ಅಕ್ರಮ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ.
ನಗರಸಭೆಯ ಅಂದಿನ ಪೌರಾಯಕ್ತರು 16 ಅಕ್ಟೋಬರ್ 2015ರಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಪರವಾನಿಗಿ ನೀಡಿದ್ದಾರೆ. ಆದರೆ, ಐದು ವರ್ಷಗಳ ಅನಂತರ ಅಂದರೆ, 2020ರ ಸಪ್ಟೆಂಬರ್ 8 ಹಾಗೂ ಡಿಸೆಂಬರ್ 12ರಂದು ಎರಡು ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ ಛಾಯಾಚಿತ್ರ ಸಮೇತ ಲಿಖಿತ ಉತ್ತರ ನೀಡಬೇಕು ಎಂದು ಮಾಲೀಕರಿಗೆ ಸೂಚಿಸಿದ್ದರು. ತಪ್ಪಿದರೆ ಸೂಕ್ತ ಕಾನೂನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ, ಮೂರು ತಿಂಗಳು ಕಳೆದರೂ ಮಾಲೀಕರು ನಗರಸಭೆ ನೋಟಿಸ್‌ಗೆ ಉತ್ತರಿಸಿಲ್ಲ. ಅಲ್ಲಿ ಐತಿಹಾಸಿಕ ಬಾವಿಗಳು ಇದ್ದವೆಂದು ನಗರದ ಜನರೇ ಹೇಳುತ್ತಿದ್ದಾರೆ. ಆದರೂ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ನಗರಸಭೆ ಪೌರಾಯುಕ್ತ ರಮೇಶ್ ಪಾಂಡುರಂಗ ಜಾಧವ್, ಕಟ್ಟಡ ಮಾಲೀಕರಿಗೆ ಎರಡು ನೋಟಿಸ್ ನೀಡಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳ ನಿಯಮ 187 ಪ್ರಕಾರ ಇನ್ನೊಮ್ಮೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ಇದರ ಬಗ್ಗೆ ಸಾಕಷ್ಟು ಪ್ರಚಾರವೂ ಆಗಿದೆ. ಜನರಲ್ಲೂ ಕುತೂಹಲ ಹೆಚ್ಚಿದೆ. ಹಾಗಾಗಿ ಹೇಳುವುದಕ್ಕಿಂತ ಕೆಲಸ ಮಾಡುವುದೇ ನಮ್ಮ ವಿಚಾರವೆಂದು ವಿಜಯಸಾಕ್ಷಿ ಪತ್ರಿಕೆಗೆ ಒಂದು ವಾರದ ಹಿಂದೆಯೇ ಪ್ರತಿಕ್ರಿಯಿಸಿದ್ದರು.
ನೋಟಿಸ್‌ಗಿಲ್ಲ ಉತ್ತರ?:
ನಗರದ ರೋಟರಿ ವೃತ್ತದಲ್ಲಿ ಎರಡು ವರ್ಗಗಳಲ್ಲಿ ನಿರ್ಮಿಸುತ್ತಿರುವ ಅಕ್ರಮ ವಾಣಿಜ್ಯ ಕಟ್ಟಡ ಮಾಲೀಕರಿಗೆ ಎರಡು ನೋಟಿಸ್ ನೀಡಿದ್ದು, ಇನ್ನೊಂದು ನೋಟಿಸ್ ಅಷ್ಟೇ ಬಾಕಿ ಉಳಿದಿದೆ ಎನ್ನುವ ಅಧಿಕಾರಿಗಳು, ಈ ಹಿಂದೆ ಕೊಟ್ಟಿರುವ ಎರಡು ನೋಟಿಸ್ ಗಳಿಗೆ ಉತ್ತರ ಬಂದಿದೆಯೇ? ಬಂದಿದ್ದರೆ ಬಹಿರಂಗ ಪಡಿಸಬಹುದಲ್ಲವೇ? ಇನ್ನೂ ಉತ್ತರ ಬಂದಿಲ್ಲವೆಂದಾದರೆ ಉಳಿದಿರುವ ಇನ್ನೊಂದು ನೋಟಿಸ್ ಜಾರಿ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದಲ್ಲವೇ? ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದೀರಿ, ಕ್ರಮ ತೆಗೆದುಕೊಂಡಿರಾ ಅಥವಾ ಅವಘಡ ಸಂಭವಿಸಿ ಪ್ರಾಣ ಹಾನಿ ಆಗುವವರೆಗೆ ಕಾದು ಕುಳಿತಿದ್ದೀರಾ? ಎಂದು ಜಿಲ್ಲೆಯ ಜನರು ಪ್ರಶ್ನಿಸುತ್ತಿದ್ದು, ನಗರಸಭೆಯ ಪೌರಾಯುಕ್ತರು ಉತ್ತರಿಸಬೇಕಿದೆ.
ಅಧಿಕಾರಿಗಳಿಗೆ ಪ್ರಭಾವಿಗಳ ಒತ್ತಡ?:
ವಾಣಿಜ್ಯ ಕಟ್ಟಡ ನಿರ್ಮಾಣ ಮತ್ತು ಅನುಮತಿಯಲ್ಲಿ ಅಧಿಕಾರಿಗಳು, ಕೆಲ ಪ್ರಭಾವಿ ಜನಪ್ರತಿನಿಧಿಗಳು ಮಾಲೀಕರ ಅಕ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಲಂಚಗುಳಿ ಅಧಿಕಾರಿಗಳು ಮಾಲೀಕ ದಲಿಚಂದ ಹಾಗೂ ಉಳಿದ 31 ಜನರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ನಗರದ ಜನತಾ ಬಜಾರ್ ಹಾಗೂ ಸ್ಟೇಷನ್ ರಸ್ತೆ ಮಧ್ಯೆ ಬರುವ ನಂಬರ್ ಬಟ್ಟೆ ಅಂಗಡಿಗಳನ್ನು ಸ್ಥಳಾಂತರಿಸುವುದಕ್ಕಾಗಿಯೇ ಈ ಕಟ್ಟಡವನ್ನು ಕಟ್ಟಲಾಗುತ್ತಿದೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.
ಮುಂದುವರೆದ ಕಾಮಗಾರಿ
ನಗರಸಭೆ ಅಧಿಕಾರಿಗಳು ನೋಟಿಸ್ ನೀಡಿದರೂ, ಉತ್ತರಿಸದ ಮಾಲೀಕರು ಕಟ್ಟಡ ಕಾಮಗಾರಿಯನ್ನು ಮಾತ್ರ ಯಾರ ಭಯವೂ ಇಲ್ಲದೆ ಮುಂದುವರೆಸಿದ್ದಾರೆ. ಕಟ್ಟಡ ಹೊರಗಿನ ಕೆಲಸ ಬಹುತೇಕ ಮುಗಿದಿದ್ದು, ಒಳಗಡೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪಾಲಾ ಬದಾಮಿ ಮುಖ್ಯರಸ್ತೆಯಲ್ಲಿರುವ ಕಟ್ಟಡದ ಪಕ್ಕದಲ್ಲೇ ಇವರದೇ ಎನ್ನಲಾಗುತ್ತಿರುವ ಇನ್ನೊಂದು ಬೃಹತ್ ಕಟ್ಟಡ ತಲೆ ಎತ್ತುತ್ತಿದೆ. ಇದೂ ನಿರ್ಮಾಣದ ಹಂತದಲ್ಲಿದೆ. ದಿನನಿತ್ಯ ನಗರಸಭೆ ಅಧಿಕಾರಿಗಳು ಕಟ್ಟಡ ಮುಂದೆಯೇ ಹಾದು ಹೋದರೂ ಅಕ್ರಮ ಕಟ್ಟಡ ಕುರಿತು ತುಟಿ ಬಿಚ್ಚಿ ಮಾತನಾಡುತ್ತಿಲ್ಲ ಎಂಬ ಮಾತುಗಳು ನಗರದಲ್ಲಿ ಹರಿದಾಡುತ್ತಿವೆ.