ವಿಜಯಸಾಕ್ಷಿ ಸುದ್ದಿ, ಗದಗ
ಸುಮಾರು 17 ವರ್ಷಗಳ ಬಳಿಕ ಅಂದರೆ, 2004ರಲ್ಲಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮಹಾಶಯನನ್ನು ವಶಕ್ಕೆ ಪಡೆಯುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರೆಮಲ್ಲಾಪೂರ(ಅಂಕಲಿ) ಗ್ರಾಮದ ವೀರಯ್ಯ ಶಿವಯ್ಯ ಹಿರೇಮಠ ಬಂಧಿತ ವ್ಯಕ್ತಿ. ಆರೋಪಿ ವೀರಯ್ಯ 2004ರ ಡಿ.16ರಂದು ತನ್ನ ಪತ್ನಿ ಈರಮ್ಮಳ ಮೇಲೆ ಶೀಲದ ಕುರಿತು ಸಂಶಯ ವ್ಯಕ್ತಪಡಿಸಿ ಅಂಕಲಿ ಗ್ರಾಮದ ದೊಡ್ಡಹಳ್ಳದಲ್ಲಿ ಕೊಲೆ ಮಾಡಿ, ಪುರಾವೆ ನಾಶಪಡಿಸಿ ಪರಾರಿಯಾಗಿದ್ದನು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಇಲ್ಲಿಯವರೆಗೂ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಶಿವಯೋಗಿ ಲೋಹಾರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಂಗಳೂರಿಗೆ ತೆರಳಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಮರಳಿಕಟ್ಟಿಯಲ್ಲಿ ಫೆ.4ರಂದು ಆರೋಪಿ ವೀರಯ್ಯನನ್ನು ಬಂಧಿಸಿದ್ದಾರೆ. ಬಳಿಕ ಲಕ್ಷ್ಮೇಶ್ವರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.