ವಿಜಯಸಾಕ್ಷಿ ಸುದ್ದಿ, ಬೀದರ್: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ ತಾಂಡದ ಯುವಕ ಅಪಹರಣಕ್ಕೊಳಗಾಗಿರುವ ಘಟನೆ ನಡೆದಿದೆ.
ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿ.14 ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ. ಜನವರಿ 16 ರಂದು ಅಜಯ್ನನ್ನು ಅಪಹರಿಸಿದ ದುಷ್ಕರ್ಮಿಗಳು, ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಮಾಡಿದ್ದಾರೆ.

ಯುವಕನ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ. ದುಷ್ಕರ್ಮಿಗಳು ಆ ಬಳಿಕ ಅಜಯ್ನನ್ನು ಕಿರ್ಗಿಸ್ತಾನ್ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಕೊಂದು ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಫೋಟೋ ರವಾನಿಸಿದ್ದಾರೆ.
ಎರಡು ಬಾರಿ ವಿಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಕೂಡಲೇ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಬೀದರ್ ಎಸ್ಪಿ ನಾಗೇಶ್, ಕಿಡ್ನಾಪ್ ಆಗಿರುವ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಆ ಹುಡುಗನೇ ಕುಟುಂಬಸ್ಥರನ್ನು ಸಂಪರ್ಕಿಸಿದ್ದು, ಕಿರ್ಗಿಸ್ಥಾನಕ್ಕೆ ಹೋಗಿರುವುದಾಗಿ ತಿಳಿಸಿದ್ದಾನೆ. ನಾವು ಇಂಡಿಯನ್ ಅಂಬಾಸಿ ಅಧಿಕಾರಿಗಳಿಗೆ ಸಂಪರ್ಕಿಸಿದ್ದು, ಅವರು ಈಗ ಆ ಹುಡುಗನನ್ನು ಮರಳಿ ತವರಿಗೆ ಕಳಿಸುತ್ತಿದ್ದಾರೆ. ಕಿಡ್ನ್ಯಾಪ್ ಕುರಿತು, ಅಲ್ಲಿಯ ಅಧಿಕಾರಿಗಳಿಗೂ ಸಹ ಹುಡುಗ ಸರಿಯಾದ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಆತ ಮರಳಿ ಬಂದ ನಂತರ ಹೆಚ್ಚಿನ ಮಾಹಿತಿಗೆ ಆತನನ್ನೇ ಸಂಪರ್ಕಿಸಬೇಕಾಗುತ್ತದೆ ಎಂದರು.