ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ನಗರೋತ್ಥಾನ ಹಂತ-4 ಯೋಜನೆಯಡಿ ವಾರ್ಡ್ ನಂ.7ರಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಹಾಗೂ ಅರ್ಧಂಬರ್ಧವಾಗಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.
ವಾರ್ಡ್ನ ಉಮನಾಬಾದಿ ಮನೆಯಿಂದ ಮಾಳೋದೆಯವರ ಮಾರ್ಗವಾಗಿ ಕನ್ಯಾಳ ಅಗಸಿವರೆಗೆ ಹಾಗೂ ಟೆಂಗಿನಕಾಯಿ ಬಜಾರ್ನ ಪುಣೇಕರ ಮನೆಯಿಂದ ಬೆಟಗೇರಿ ಬಸ್ ನಿಲ್ದಾಣದವರೆಗೆ ಚರಂಡಿ ನಿರ್ಮಾಣಕ್ಕೆ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆ.ವಿ.ಆರ್. ಕನ್ಸ್ಟ್ರಕ್ಷನ್ ಸಂಸ್ಥೆ ನಿಗದಿತ ಸ್ಥಳಗಳ ಬದಲಿಗೆ ಕೆಲವೇ ಭಾಗಗಳಲ್ಲಿ ಕಾಮಗಾರಿ ನಡೆಸಿ, ಉಳಿದ ಕಡೆ ಕಾಮಗಾರಿ ಅಪೂರ್ಣವಾಗಿ ಬಿಟ್ಟಿದೆ ಎಂದು ಅವರು ದೂರಿದ್ದಾರೆ.
ನಿರ್ಮಿಸಿರುವ ಚರಂಡಿಗಳ ಮೇಲೂ ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದ ಸಿ.ಡಿ.ಗಳನ್ನು ಅಳವಡಿಸಿಲ್ಲ. ಪರಿಣಾಮ ಜನರು ಚರಂಡಿ ದಾಟಲು ಪರದಾಡುವಂತಾಗಿದೆ. ಅಲ್ಲದೆ, ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿ ಬಳಸದೇ, ಅಗತ್ಯ ಪೈಪ್ಗಳನ್ನು ಅಳವಡಿಸದ ಕಾರಣ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ದುರ್ವಾಸನೆ ಹಾಗೂ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಯಳವತ್ತಿ ಹೇಳಿದ್ದಾರೆ.

ನಾಲ್ಕು ಬಾರಿ ಮನವಿ; ಸ್ಥಳ ಪರಿಶೀಲನೆಯಾದರೂ ಪರಿಹಾರವಿಲ್ಲ
ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಮೂರು-ನಾಲ್ಕು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದೆ. ಬಳಿಕ ಜಿಲ್ಲಾ ಯೋಜನಾ ನಿರ್ದೇಶಕರು, ಮುಖ್ಯ ಕಾರ್ಯಪಾಲಕ ಅಭಿಯಂತರರು, ನಗರಸಭೆ ಪೌರಾಯುಕ್ತರು, ಅಭಿಯಂತರರು ಹಾಗೂ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಆದರೆ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆ ಸಂಸ್ಥೆಯು ಕಾಮಗಾರಿಗೆ ಸಂಬಂಧಿಸಿದ ನಿಗದಿತ ಮಾನದಂಡಗಳನ್ನು ಪಾಲಿಸದೆ ವಿಳಂಬ ಮಾಡುತ್ತಿದೆ. ಸಮರ್ಪಕ ಯಂತ್ರೋಪಕರಣ ಮತ್ತು ಕಾರ್ಮಿಕರ ಕೊರತೆಯ ನೆಪದಲ್ಲಿ ಕಾಮಗಾರಿ ಮುಂದೂಡಲಾಗುತ್ತಿದೆ. ಅಲ್ಲದೆ, ಮೂಲ ಗುತ್ತಿಗೆ ಸಂಸ್ಥೆ ಸ್ಥಳೀಯ ಸಬ್ಕಾಂಟ್ರಾಕ್ಟರ್ಗಳಿಗೆ ಕಾಮಗಾರಿ ವಹಿಸಿರುವುದರಿಂದ ಗುಣಮಟ್ಟ ಹಾಗೂ ಕಾಮಗಾರಿ ಪೂರ್ಣಗೊಳಿಸುವಿಕೆಯಲ್ಲಿ ಮತ್ತಷ್ಟು ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
₹50 ಲಕ್ಷದ ಕಾಮಗಾರಿ; ಪೂರ್ಣಗೊಂಡಿದ್ದು ಎಷ್ಟು?
ವಾರ್ಡ್ ನಂ.7ರಲ್ಲಿ ಚರಂಡಿ ನಿರ್ಮಾಣಕ್ಕೆ ಸುಮಾರು ₹50 ಲಕ್ಷ ಅನುದಾನ ನಿಗದಿಯಾಗಿದ್ದು, ಈವರೆಗೆ ಅಂದಾಜು ₹20 ಲಕ್ಷದಷ್ಟು ಮಾತ್ರ ಕಾಮಗಾರಿ ನಡೆದಿದೆ. ಉಳಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಯಳವತ್ತಿ ಆರೋಪಿಸಿದ್ದಾರೆ.
ಅಂದಾಜು ಪತ್ರಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಅಂದಾಜು ರೂಪಿಸಿರುವುದರಿಂದ ಸಮಸ್ಯೆ ಎದುರಾಗಿದೆ. ವಾರ್ಡ್ನ ವಿವಿಧ ಭಾಗಗಳಲ್ಲಿ ಅಗತ್ಯವಿರುವ ಕಾಮಗಾರಿಗಳ ಸ್ಥಳಗಳನ್ನು ತಿಳಿಸಿದ್ದರೂ ಕೆಲವು ಪ್ರದೇಶಗಳನ್ನು ಅಂದಾಜು ಪತ್ರಿಕೆಯಲ್ಲಿ ಸೇರಿಸಿಲ್ಲ ಎಂದು ಅವರು ದೂರಿದ್ದಾರೆ. ಕಾಮಗಾರಿ ವಿಳಂಬ ಹಾಗೂ ಕಳಪೆ ಗುಣಮಟ್ಟದ ಕುರಿತು ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಗದಗ-ಬೆಟಗೇರಿ ನಗರಸಭೆಯ ಇತರ ವಾರ್ಡ್ಗಳಲ್ಲಿಯೂ ಇದೇ ಸಂಸ್ಥೆಯ ಕಾಮಗಾರಿಗಳ ಬಗ್ಗೆ ದೂರುಗಳಿವೆ ಎಂದು ಆರೋಪಿಸಿರುವ ಯಳವತ್ತಿ, ಜಿಲ್ಲಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ವಿ.ಆರ್. ಕನ್ಸ್ಟ್ರಕ್ಷನ್ ಸಂಸ್ಥೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕಳಪೆ ಹಾಗೂ ಅಪೂರ್ಣ ಕಾಮಗಾರಿಗೆ ಬಿಲ್ ಪಾವತಿಸಬಾರದು. ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಉಳಿದ ಅನುದಾನದಲ್ಲಿ ಅಗತ್ಯವಿರುವ ಕಡೆ ಸಮರ್ಪಕ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.”
— ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ



