21.4 C
Gadag
Wednesday, September 27, 2023

ಕಾರ್ಮಿಕರ ಕಿಟ್ ಕೆವಿಕೆಗೆ ಶಿಪ್ಟ್: ಕಾರ್ಮಿಕ ಇಲಾಖೆಯ ಅಧಿಕಾರಿಗಳ ಎಡವಟ್ಟು

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಬಡ ಕಾರ್ಮಿಕರಿಗೆ ವಿತರಿಸಲು ರಾಜ್ಯ ಸರ್ಕಾರ ಪೂರೈಸಿರುವ ಸುಮಾರು ಮೂರು ಸಾವಿರ ಆಹಾರದ ಕಿಟ್‌ಗಳನ್ನು ಜಿಲ್ಲಾಕೇಂದ್ರದ ಸರ್ಕಾರಿ ಕಟ್ಟಡಗಳನ್ನು ಬಿಟ್ಟು, ಶಾಸಕರ ಪ್ರಭಾವಕ್ಕೊಳಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರಕ್ಕೆ (ಕೆವಿಕೆ) ಸಾಗಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರಿಗೆ ಮನವಿ ಸಲ್ಲಿಸಿರುವ ಅವರು, ಕೋವಿಡ್-೧೯ ಹಿನ್ನೆಲೆಯಲ್ಲಿ ಬಡ ಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರ ಆಹಾರದ ಕಿಟ್‌ಗಳನ್ನು ಪೂರೈಸಿದೆ. ಅರ್ಹರನ್ನು ಗುರುತಿಸಿ ಕಿಟ್‌ಗಳನ್ನು ವಿತರಿಸಬೇಕಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ  ಕೆವಿಕೆಗೆ ಸಾಗಿಸಿದ್ದಾರೆ.

ಆಹಾರದ ಕಿಟ್‌ಗಳನ್ನು ತಕ್ಷಣವೇ ಗದಗನ ಯಾವುದಾದರೂ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕೂಡಲೇ ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಸುಧಾ ಗರಗ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸುಮಾರು ಮೂರು ದಿನಗಳ ಹಿಂದೆ ಕಾರ್ಮಿಕರಿಗೆ ವಿತರಿಸಲು ರಾಜ್ಯ ಸರ್ಕಾರ ಮೂರು ಸಾವಿರ ಆಹಾರದ ಕಿಟ್‌ಗಳನ್ನು ಬೆಂಗಳೂರಿನಿಂದ ಕಳುಹಿಸಿ ಕೊಟ್ಟಿತ್ತು. ಆದರೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗದಗ ನಗರದಲ್ಲಿರುವ ಬೃಹತ್ ಸರ್ಕಾರಿ ಕಟ್ಟಡಗಳನ್ನು ಬಿಟ್ಟು, ಹುಲಕೋಟಿಯ ಕೆವಿಕೆಯಲ್ಲಿಯೇ ಇಳಿಸಿದ್ದು ಯಾಕೆ? ಅಲ್ಲದೇ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿಲ್ಲ. ಸದ್ಯ ಹುಲಕೋಟಿಯಲ್ಲಿರುವ ಆಹಾರದ ಕಿಟ್‌ಗಳನ್ನು ಮತ್ತೊಮ್ಮೆ ಜಿಲ್ಲಾಕೇಂದ್ರಕ್ಕೆ ಹೊತ್ತು ತರುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಕಾಂತಿಲಾಲ್ ಬನ್ಸಾಲಿ, ನಗರಸಭೆ ಮಾಜಿ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ್ ಅಬ್ಬಿಗೇರಿ, ಶಿವಲಿಂಗ ಶಾಸ್ತ್ರಿ, ಗಂಗಾಧರ ಮೇಲಗಿರಿ, ಬಾಬು ಯಲಿಗಾರ, ವಿಲ್ಸನ್ ಕಂಬಳಿ, ಕೆ.ಪಿ.ಕೋಟಿಗೌಡ್ರ, ರಮೇಶ್ ಸಜ್ಜಗಾರ, ಮಂಜುನಾಥ ತಳವಾರ, ಚಂದ್ರಕಾಂತ ವರ್ಣೇಕರ, ಸಾದಿಕ್ ಮನಿಯಾರ್, ದ್ಯಾಮಣ್ಣ ನೀಲಗುಂದ, ರಾಚಯ್ಯ ಹೊಸಮಠ, ಬಸವರಾಜ ಮೆಣಸಿನಕಾಯಿ, ಆನಂದ ಗುರುಸ್ವಾಮಿ, ಶರಣಪ್ಪ ಕಮಡೊಳ್ಳಿ, ಮೋಹನ ಮಾಳಗಿಮನಿ, ವಿಜಯಲಕ್ಷ್ಮಿ ಮಾನ್ವಿ, ಪುಷ್ಪಾ ಪೂಜಾರ, ಅಶ್ವಿನಿ ಜಾಗತಾಪ, ವಂದನಾ ವರ್ಣೇಕರ, ರತ್ನಾ ಕುರಗೋಡು, ಗೀತಾ ಮಾಳಗಿಮನಿ ಸೇರಿದಂತೆ ಅನೇಕರು ಇದ್ದರು.

ಮತದಾರರ ಪಟ್ಟಿ ಪಾರದರ್ಶಕವಾಗಿರಲಿ

ಕಾಂಗ್ರೆಸ್ ಪಕ್ಷದ ಷಡ್ಯಂತ್ರದಿಂದ ಗದಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿಗೆ ಬರುವ ಮತದಾರರನ್ನು ಕಿತ್ತು ಹಾಕಲಾಗುತ್ತಿದೆ. ಅಧಿಕಾರಿಗಳು ಮತದಾರರ ಮನೆಗಳಿಗೆ ಹೋಗದೇ, ಮತದಾರರು ವಿಳಾಸದಲ್ಲಿಲ್ಲ ಎಂಬ ಸುಳ್ಳು ಮಾಹಿತಿ ದಾಖಲಿಸಿ, ಮತದಾರರ ಪಟ್ಟಿಯಿಂದ ಕೈಬಿಡುತ್ತಿದ್ದು ಈ ಮೂಲಕ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಈ ಬಾರಿಯೂ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಮತದಾರರನ್ನು ಕೈಬಿಡುವ ಹುನ್ನಾರ ನಡೆಯುತ್ತಿದ್ದು,  ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಜಿಲ್ಲಾಡಳಿತ ಸಿದ್ಧಗೊಳಿಸಬೇಕು

ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ

Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!