ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಬ್ಗೆ ಅವಕಾಶ ನೀಡಿದ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಬಿಜೆಪಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಹಿಜಬ್ ವಿಚಾರದ ಬಗ್ಗೆ ಪ್ರಶ್ನಿಸುವ ಮುನ್ನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಸಂಕಷ್ಟಕ್ಕೀಡಾದ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ ಮಾತನಾಡಲಿ ಎಂದು ಅವರು ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹಿಜಬ್ ಮಾತ್ರವಲ್ಲ, ಇದಕ್ಕೂ ಮೊದಲು ಶಿವದಾರ ಹಾಗೂ ಜನಿವಾರ ಕುರಿತು ಕೂಡ ನಿರ್ಧಾರ ತೆಗೆದುಕೊಂಡಿದ್ದೆ. ಆಗ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಈಗ ಕೇವಲ ಹಿಜಬ್ ವಿಷಯ ಮಾತ್ರ ಕೆಲವರಿಗೆ ಕಾಣಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತರ ಓಲೈಕೆ ರಾಜಕೀಯ ಎಂದು ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ನಾವು ಪ್ರಣಾಳಿಕೆಯಲ್ಲಿ ಸಮಾನತೆಯ ಭರವಸೆ ನೀಡಿದ್ದೇವೆ. ಜಾತಿ ಅಥವಾ ಧರ್ಮದ ಆಧಾರದಲ್ಲಿ ಯಾರನ್ನೂ ಓಲೈಸುವ ಕೆಲಸ ಮಾಡುತ್ತಿಲ್ಲ. ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ನಿಯಮಗಳನ್ನೇ ರಾಜ್ಯದಲ್ಲೂ ಜಾರಿಗೆ ತಂದಿದ್ದೇವೆ ಎಂದು ಹೇಳಿದ ಸಚಿವರು, “ಇದು ಹೊಸ ಆದೇಶವಲ್ಲ. ವಿರೋಧಿಸುವವರು ಕೇಂದ್ರೀಯ ವಿದ್ಯಾಲಯಗಳ ಮುಂದೆ ಅಥವಾ ಮಹಾರಾಷ್ಟ್ರದಲ್ಲಿ ಹೋಗಿ ಪ್ರತಿಭಟನೆ ಮಾಡಲಿ” ಎಂದು ಸವಾಲು ಹಾಕಿದರು.
ಇದೇ ವೇಳೆ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಧು ಬಂಗಾರಪ್ಪ, 25 ಲಕ್ಷ ಮಕ್ಕಳ ಭವಿಷ್ಯ ಹಾಳಾಗಿದೆ. ಒಂದು ವರ್ಷ ಓದಿ ಪರೀಕ್ಷೆಗೆ ಸಿದ್ಧರಾದ ವಿದ್ಯಾರ್ಥಿಗಳ ಭಾವನೆ, ಒತ್ತಡ ಮತ್ತು ಪರಿಶ್ರಮಕ್ಕೆ ಯಾರು ಉತ್ತರ ಕೊಡುತ್ತಾರೆ? ಎಂದು ಪ್ರಶ್ನಿಸಿದರು.
“ಪರೀಕ್ಷಾ ಪೇ ಚರ್ಚಾ ಮಾಡುವವರು ಈಗ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಏಕೆ ಮೌನವಾಗಿದ್ದಾರೆ? ಇದರ ಬಗ್ಗೆ ಉತ್ತರ ಕೊಡಬೇಕಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ದೂರ ಉಳಿದಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.



