ವಿಜಯಸಾಕ್ಷಿ ಸುದ್ದಿ, ಗದಗ;
ಶನಿವಾರ ಸಂಜೆ ಮನೆಯಿಂದ ಕಾಣಿಯಾಗಿದ್ದ ಬಾಲಕಿಯೊಬ್ಬಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಕೊಲಗೀಡಾದ ಬಾಲಕಿ ಅದೇ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ.
ಕಳೆದ ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಬಾಲಕಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.
ಭಾನುವಾರ ಗ್ರಾಮೀಣ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಲು ಬಂದಿದ್ದರು. ಆದರೆ ಬಾಲಕಿಯ ಭಾವಚಿತ್ರ ಇರದ ಕಾರಣ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ದಿನಗಳ ಕಾಲ ಹುಡುಕಾಡಿದರೂ ಬಾಲಕಿ ಇರುವಿಕೆ ಪತ್ತೆಯಾಗಿರಲಿಲ್ಲ. ಇಂದು ಸಂಜೆ ಕೊಳೆತ ವಾಸನೆ ಬಂದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯಕ್ಕೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯಾ ಅಥವಾ ಒಬ್ಬನೇ ಕೊಲೆ ಮಾಡಿರಬಹುದಾ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಸುದ್ದಿ ತಿಳಿದ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ಸ್‌ಪೆಕ್ಟರ್ ರವಿ ಕಪ್ಪತನವರ, ಪಿಎಸ್ಐ ಅಜಿತಕುಮಾರ್ ಹೊಸಮನಿ ಸ್ಥಳದಲ್ಲಿದ್ದು ಘಟನೆಯ ಮಾಹಿತಿ ಪಡೆದಿದ್ದು, ಕೊಲೆ ಮಾಡಿರುವ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.