ವಿಜಯಸಾಕ್ಷಿ ಸುದ್ದಿ, ಗದಗ
ಸುಳ್ಳು ಜಾತಿ ಪ್ರಮಾಣಪತ್ರವನ್ನು ನೀಡಿ ಅದೇ ಪ್ರಮಾಣಪತ್ರದ ಆಧಾರದಿಂದ ಶಿಕ್ಷಣ ಇಲಾಖೆಯಲ್ಲಿ ಪ.ಪಂಗಡದ ಅಭ್ಯರ್ಥಿಗೆ ಮೀಸಲಾಗಿದ್ದ ಶಿಕ್ಷಕಿ ಹುದ್ದೆಯನ್ನು ಪಡೆದುಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಆರೋಪಿತಳಾದ ಅನೀಸಾಬಾನು ಅಲ್ಲಾಭಕ್ಷ ಬಾಲಸಿಂಗ್ ಮೂಲತಃ ಸುನ್ನಿ ಮುಸಲ್ಮಾನ ಜಾತಿಗೆ ಸೇರಿದವಳಾಗಿದ್ದು, ತಾನು ಚೋಧಾರ ಪರಿಶಿಷ್ಟ ಪಂಗಡ ಜಾತಿಗೆ ಸೇರಿದವಳಿದ್ದೇನೆ ಎಂದು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಗದಗ ತಹಶೀಲ್ದಾರರಿಗೆ 22-7-1988, 26-5-1989ರಂದು ನೀಡಿ ಗದಗ ತಹಶೀಲ್ದಾರರು ತಮ್ಮ ವಿಧಿಬದ್ಧ ಅಧಿಕಾರ ದುರುಪಯೋಗವಾಗುವಂತೆ ಹಾಗೂ ನಿಜವಾದ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗುವಂತೆ ಚೋಧಾರ ಪರಿಶಿಷ್ಠ ಪಂಗಡದ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ ಬಲಾತ್ಕಾರ ಪ್ರಕರಣ: ಆರೋಪಿಗೆ ದಂಡ, ಜೈಲು ಶಿಕ್ಷೆ
ಇದೇ ಪ್ರಮಾಣಪತ್ರದ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾಗಿದ್ದ ಶಿಕ್ಷಕಿ ಹುದ್ದೆಯನ್ನು ಪಡೆದುಕೊಂಡು ಶಿಕ್ಷಕಿಯಾಗಿ ಆಯ್ಕೆಯಾಗಿ ನಿಜವಾದ ಪ.ಪಂಗಡದ ಜನರಿಗೆ ಹಾಗೂ ಸರ್ಕಾರಕ್ಕೆ ಮೋಸವೆಸಗಿದ ಅಪರಾಧದ ಕುರಿತಾಗಿ ಪೊಲೀಸ್ ನಿರೀಕ್ಷಕರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿಯ ಎ.ಎನ್. ಗಾಳಿ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಸಿಂಹಸಾ. ಎಂ.ವಿ ಅವರು, ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಅನೀಸಾಬಾನು ಅಲ್ಲಾಭಕ್ಷ ಬಾಲಸಿಂಗ್ ಇವಳಿಗೆ ಜು.22ರಂದು ಭಾ.ದಂ.ಸಂ ಕಲಂ: 197,198,199 ಮತ್ತು 200ರ ಅಡಿಯಲ್ಲಿ 3 ವರ್ಷ ಸಾದಾ ಶಿಕ್ಷೆ ಹಾಗೂ 5 ಸಾವಿರ.ರೂ ದಂಡ ಮತ್ತು ಕಲಂ: 420 ಅಡಿಯಲ್ಲಿ 5 ವರ್ಷ ಸಾದಾ ಶಿಕ್ಷೆ ಹಾಗೂ 50 ಸಾವಿರ.ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.