ಬೆಂಗಳೂರು: 2026ರ ‘ಬಾಲ್ಯ ಕ್ಯಾನ್ಸರ್ ಜಾಗೃತಿ ಅಭಿಯಾನ’ದ (Childhood Cancer Awareness Campaign) ಪ್ರಯುಕ್ತ, ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಕುರಿತು ಬೆಂಗಳೂರಿನ ಪ್ರಸಿದ್ಧ ಕಿದ್ವಾಯಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯು ಆತಂಕಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಪ್ರಮುಖ ಸಲಹೆ-ಸೂಚನೆಗಳನ್ನು ನೀಡಿದೆ.
ವಿಶ್ವದಲ್ಲಿ ಪ್ರತಿವರ್ಷ ಸುಮಾರು 2.73 ಲಕ್ಷ ಮಕ್ಕಳಿಗೆ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ದಿನಕ್ಕೆ ಸರಾಸರಿ 1,000 ಮಕ್ಕಳು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 1.5 ರಷ್ಟು ಮಕ್ಕಳ ಕ್ಯಾನ್ಸರ್ ಪ್ರಕರಣಗಳಾಗಿವೆ. ಇನ್ನು ಭಾರತದಲ್ಲಿ ಪ್ರತಿವರ್ಷ ಸುಮಾರು 35,240 ಮಕ್ಕಳಿಗೆ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ವಾರ್ಷಿಕ 16,850 ಸಾವುಗಳು ಸಂಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ. ದೇಶದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಮಕ್ಕಳ ಕ್ಯಾನ್ಸರ್ ಪಾಲು ಶೇ 2.5 ರಷ್ಟಿದೆ.
ಕರ್ನಾಟಕದಲ್ಲಿ 2025 ರಲ್ಲಿ 1,882 ಬಾಲ್ಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, 312 ಸಾವುಗಳು ಸಂಭವಿಸಿವೆ. ಇದರಲ್ಲಿ ಬೆಂಗಳೂರಿನಲ್ಲೇ 349 ಪ್ರಕರಣಗಳು ಹಾಗೂ 56 ಸಾವುಗಳು ವರದಿಯಾಗಿವೆ. 2024 ರಲ್ಲಿ ಕಿದ್ವಾಯಿ ಆಸ್ಪತ್ರೆಯೊಂದರಲ್ಲೇ 0 – 19 ವರ್ಷದೊಳಗಿನ 588 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 65 ಹಾಸಿಗೆಗಳ ವಾರ್ಡ್ ಹಾಗೂ 16 ಹಾಸಿಗೆಗಳ PICU ಸೌಲಭ್ಯವಿದೆ.
ಮಕ್ಕಳಲ್ಲಿ ಅತಿ ಹೆಚ್ಚಾಗಿ ‘ಲ್ಯುಕೇಮಿಯಾ’ (ರಕ್ತದ ಕ್ಯಾನ್ಸರ್) ಕಂಡುಬರುತ್ತಿದ್ದು, ಬಾಲಕರ ಪ್ರಕರಣಗಳಲ್ಲಿ ಶೇ 40.3 ಹಾಗೂ ಬಾಲಕಿಯರಲ್ಲಿ ಶೇ 34.3 ರಷ್ಟು ಲ್ಯುಕೇಮಿಯಾ ಇರುವುದು ತಿಳಿದುಬಂದಿದೆ. ಇದಲ್ಲದೆ ಮೆದುಳು ಮತ್ತು ನರ್ವಸ್ ಸಿಸ್ಟಮ್‌ಗೆ ಸಂಬಂಧಿಸಿದ ಟ್ಯೂಮರ್‌ಗಳೂ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.
ಆರಂಭಿಕ ರೋಗಲಕ್ಷಣಗಳೇನು? ಮಕ್ಕಳಲ್ಲಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಅಗತ್ಯವಾಗಿದ್ದು, ಕೆಳಗಿನ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬಾರದು:
- ದೇಹದಲ್ಲಿ ಗಡ್ಡೆ ಅಥವಾ ನಿರಂತರ ಜ್ವರ
- ಚರ್ಮ ಬಿಳಿಯಾಗುವುದು ಹಾಗೂ ಸುಲಭವಾಗಿ ರಕ್ತಸ್ರಾವವಾಗುವುದು
- ತಲೆನೋವು, ವಾಂತಿ, ದಿಢೀರ್ ತೂಕ ಇಳಿಕೆ ಹಾಗೂ ನಿರಂತರ ಸುಸ್ತು ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಕಿದ್ವಾಯಿ ಸಂಸ್ಥೆ ಸಲಹೆ ನೀಡಿದೆ.



