ಬೆಳಗಾವಿ: ರೈತನ ಜಮೀನಿನಲ್ಲಿ ಬರೋಬ್ಬರಿ 37 ಮೊಸಳೆ ಮರಿಗಳು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ.
ರೈತರ ಜಮೀನಿನಲ್ಲಿ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಮೊಸಳೆ ಮರಿಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಮೀನಿನ ಸುತ್ತಮುತ್ತ ಮೊಸಳೆ ಮರಿಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ವೀಕ್ಷಕ ಮಾರುತಿ ಗಸ್ತಿ, ಕಾರ್ಯಾಚರಣೆ ನಡೆಸಿ 37 ಮೊಸಳೆ ಮರಿಗಳನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
ಬಳಿಕ ಮೊಸಳೆ ಮರಿಗಳನ್ನು ಯಾವುದೇ ಅಪಾಯವಾಗದಂತೆ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಅರಣ್ಯ ಇಲಾಖೆಯ ಸಮಯೋಚಿತ ಕಾರ್ಯಾಚರಣೆಯಿಂದ ರೈತರು ಹಾಗೂ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



