HomeGadag News6 ಕಿ.ಮೀ. ರಸ್ತೆ, 45 ನಿಮಿಷದ ನರಕಯಾತನೆ: ನರೇಗಲ್ಲ–ತೊಂಡಿಹಾಳ ಮಾರ್ಗ ಹದಗೆಟ್ಟು ಹೈರಾಣು

6 ಕಿ.ಮೀ. ರಸ್ತೆ, 45 ನಿಮಿಷದ ನರಕಯಾತನೆ: ನರೇಗಲ್ಲ–ತೊಂಡಿಹಾಳ ಮಾರ್ಗ ಹದಗೆಟ್ಟು ಹೈರಾಣು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೇವಲ ಆರು ಕಿಲೋಮೀಟರ್ ರಸ್ತೆ ಕ್ರಮಿಸಲು ಮುಕ್ಕಾಲು ಗಂಟೆ ಬೇಕು ಎಂದರೆ ಆ ರಸ್ತೆಯ ದುಸ್ಥಿತಿ ಎಷ್ಟಿರಬಹುದು? ನರೇಗಲ್ಲ–ತೊಂಡಿಹಾಳ ನಡುವಿನ ಪ್ರಮುಖ ಸಂಪರ್ಕ ರಸ್ತೆ ಇದೀಗ ಇದೇ ದುಸ್ಥಿತಿಗೆ ಸಾಕ್ಷಿಯಾಗಿದೆ. ಸಂಪೂರ್ಣ ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ.

ನರೇಗಲ್ಲ–ತೊಂಡಿಹಾಳ ನಡುವಿನ ಸುಮಾರು 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಈ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ಬದಲು ರಸ್ತೆಯನ್ನೇ ಹುಡುಕಿಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಸಣ್ಣ ವಾಹನಗಳ ಚಾಲಕರಿಗೂ ರಸ್ತೆ ಸಂಚಾರ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನರೇಗಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೊಂಡಿಹಾಳ ಮಾರ್ಗವು ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಮುಂದಿನ ಪ್ರದೇಶಗಳನ್ನು ಹೈದರಾಬಾದ್–ಕರ್ನಾಟಕ ಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದರೂ, ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿ ವಿಚಾರದಲ್ಲಿ ಸಂಬಂಧಿಸಿದ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಆಂಬ್ಯುಲೆನ್ಸ್‌ಗೂ ಸಂಕಷ್ಟ… ಶಾಲಾ ವಾಹನಗಳಿಗೂ ತೊಂದರೆ

ರಸ್ತೆ ಹದಗೆಟ್ಟಿರುವ ಪರಿಣಾಮ ವಾಹನಗಳ ನಿರ್ವಹಣಾ ವೆಚ್ಚವೂ ಹೆಚ್ಚುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳು ವೇಗವಾಗಿ ಸಂಚರಿಸುವುದಕ್ಕೂ ಅಡ್ಡಿಯಾಗುತ್ತಿದೆ. ಶಾಲಾ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ರಸ್ತೆ ದುಸ್ಥಿತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ರಸ್ತೆಯಿಂದ ಕೆಲವೇ ಕಿಲೋಮೀಟರ್ ಪ್ರಯಾಣಕ್ಕೂ ಮುಕ್ಕಾಲು ಗಂಟೆ ಸಮಯ ವ್ಯಯವಾಗುತ್ತಿದೆ. ಅಭಿವೃದ್ಧಿಯ ಮಾತುಗಳು ಕೇಳಿಬರುತ್ತಿದ್ದರೂ, ಪ್ರಮುಖ ಸಂಪರ್ಕ ರಸ್ತೆಯ ಈ ದುಸ್ಥಿತಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಅಗತ್ಯವಿದ್ದರೆ ಸಂಪೂರ್ಣವಾಗಿ ನವೀಕರಣ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ನರೇಗಲ್ಲ–ತೊಂಡಿಹಾಳ ರಸ್ತೆ ಈ ಭಾಗದ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೇವಲ 6 ಕಿ.ಮೀ. ಪ್ರಯಾಣಕ್ಕೂ ಮುಕ್ಕಾಲು ಗಂಟೆ ಬೇಕಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಸ್ಥಳೀಯ ಸಾರ್ವಜನಿಕರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img