ವಿಜಯಸಾಕ್ಷಿ ಸುದ್ದಿ, ಗದಗ: ಗಣಿತವೆಂದರೆ ಭಯಪಡುವ ವಿಷಯವಲ್ಲ, ಅದು ಕುತೂಹಲ, ಚಿಂತನೆ ಹಾಗೂ ಹೊಸ ಸಾಧ್ಯತೆಗಳ ಜಗತ್ತು ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಗಣಿತ ಬಾಲ ಭಾಸ್ಕರ’ ಕಾರ್ಯಕ್ರಮವು ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ನಡೆದ ‘ಗಣಿತ ಬಾಲ ಭಾಸ್ಕರ’ ಸೆಮಿಫೈನಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಚ್.ಕೆ. ಪಾಟೀಲ ಪ್ರತಿಷ್ಠಾನ, ಜಿ.ಎನ್.ಟಿ.ಟಿ.ಎಫ್ ಹಾಗೂ ಜಿ.ಸಿ.ಐ.ಇ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸ್ಪರ್ಧಾತ್ಮಕ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.
ಗಣಿತದ ಮೇಲಿನ ಭಯವನ್ನು ದೂರ ಮಾಡಿ, ವಿಷಯದ ಬಗ್ಗೆ ಆಸಕ್ತಿ ಮತ್ತು ಪ್ರೀತಿ ಬೆಳೆಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲ್ಯ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ವೃದ್ಧಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಗೆಲುವು-ಸೋಲಿಗಿಂತ ಅನುಭವ ಮುಖ್ಯ
ಎಚ್.ಕೆ. ಪಾಟೀಲ ಪ್ರತಿಷ್ಠಾನದ ನಿರ್ದೇಶಕ ಆನಂದ ಪೋತ್ನಿಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಾತ್ರ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಪಡೆಯುವ ಹೊಸ ಅನುಭವ ಮತ್ತು ಕಲಿಕೆಯೇ ಅತ್ಯಂತ ಮಹತ್ವದ್ದು ಎಂದರು.
ಕಾರ್ಯಕ್ರಮದ ಯಶಸ್ಸಿಗೆ ಗದಗ ಜಿಲ್ಲಾ ಶಿಕ್ಷಣ ಇಲಾಖೆ, ಗ್ರಾಮೀಣ ವೈದ್ಯಕೀಯ ಸೇವಾ ಸಂಸ್ಥೆ ಹಾಗೂ ಜೇಸಿ ಪ್ರೌಢಶಾಲೆಗಳ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಹಜ ಪ್ರತಿಭೆ ಮತ್ತು ಕೌಶಲ್ಯ ಅಡಗಿರುತ್ತದೆ. ಸೂಕ್ತ ಅವಕಾಶ ದೊರೆತಾಗ ಆ ಪ್ರತಿಭೆಯನ್ನು ಗುರುತಿಸಿ ಹೊರತರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೇಸಿ ಪ್ರೌಢಶಾಲೆಯ ಅಧ್ಯಕ್ಷ ವಾಸಣ್ಣ ಕುರುಡಗಿ, ಜಿ.ಎನ್.ಟಿ.ಟಿ.ಎಫ್ ಉಪಾಧ್ಯಕ್ಷ ಪ್ರಭು ದಂಡಾವತಿಮಠ, ಆರ್.ಆರ್. ಓದುಗೌಡರ ಸೇರಿದಂತೆ ಜಿ.ಎನ್.ಟಿ.ಟಿ.ಎಫ್ ಹಾಗೂ ಜಿ.ಸಿ.ಐ.ಇ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸೌಮ್ಯಾ ಪಾಟೀಲ ನಿರೂಪಿಸಿದರು. ಮಧುಸೂಧನ ಪುಣೇಕರ ವಂದಿಸಿದರು.
ಗಣಿತದ ಭಯವನ್ನು ಬಿಟ್ಟು ಗಣಿತದೊಂದಿಗೆ ಸ್ನೇಹ ಬೆಳೆಸೋಣ. ಇಂದಿನ ಆತ್ಮವಿಶ್ವಾಸವೇ ನಾಳಿನ ಯಶಸ್ಸಿನ ಮೆಟ್ಟಿಲಾಗಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು, ಪ್ರತಿಯೊಂದು ಅವಕಾಶವನ್ನೂ ಬಳಸಿಕೊಂಡು ಸ್ಪರ್ಧಾತ್ಮಕ ಭವಿಷ್ಯದತ್ತ ಹೆಜ್ಜೆ ಹಾಕಬೇಕು.
— ಕೃಷ್ಣಗೌಡ ಎಚ್. ಪಾಟೀಲ



