ಬೆಂಗಳೂರು: ರೋಗಿಗಳ ಭದ್ರತೆ ಇರಬೇಕಾದ ಆಸ್ಪತ್ರೆಯಲ್ಲೇ ಕಳ್ಳತನ ನಡೆದಿರುವ ಘಟನೆ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಬ್ಬರ 9.7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಲ್ಲಿನ ಮಹಿಳಾ ಸಿಬ್ಬಂದಿಯೇ ಕದ್ದಿರುವುದು ಬಹಿರಂಗವಾಗಿದೆ.
ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ತಮ್ಮ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಆಪರೇಷನ್ ಮುನ್ನ ಆಭರಣಗಳನ್ನು ತೆಗೆದು ಕಪಾಟಿನಲ್ಲಿ ಇಡುವಂತೆ ನರ್ಸಿಂಗ್ ಸಿಬ್ಬಂದಿ ಸೂಚಿಸಿದ್ದರು. ಅದರಂತೆ 65 ಗ್ರಾಂ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ಕಿವಿಯೋಲೆ ಮತ್ತು 10 ಗ್ರಾಂ ಬೆಳ್ಳಿ ಕಾಲುಗಜ್ಜೆಗಳನ್ನು ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನಲ್ಲಿ ಇಡಲಾಗಿತ್ತು.
ಆದರೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಪರಿಶೀಲಿಸಿದಾಗ ಆಭರಣಗಳು ನಾಪತ್ತೆಯಾಗಿದ್ದವು. ಕಪಾಟು ಒಡೆದ ಗುರುತುಗಳೂ ಇಲ್ಲದ ಕಾರಣ ಆಸ್ಪತ್ರೆಯೊಳಗಿನವರ ಮೇಲೆಯೇ ಅನುಮಾನ ಮೂಡಿತ್ತು. ತಕ್ಷಣ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ನಂತರ ಹೆಣ್ಣೂರು ಪೊಲೀಸರಿಗೆ ದೂರು ಸಲ್ಲಿಸಲಾಯಿತು.
ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಈ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಕದ್ದ ಆಭರಣಗಳ ಪತ್ತೆಗಾಗಿ ಮುಂದಿನ ತನಿಖೆ ಚುರುಕುಗೊಂಡಿದೆ.



