ವಿಜಯಸಾಕ್ಷಿ ಸುದ್ದಿ, ರೋಣ : ಅಬ್ಬಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಎನ್‌ಆರ್‌ಎಲ್‌ಎಂ ಮಹಿಳಾ ಸಂಘಟನೆಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮನೆಯಲ್ಲಿನ ಮಹಿಳೆಯರ ಕೈಯಲ್ಲಿ ಮತದಾನ ಜಾಗೃತಿ ಮೂಡಿಸುವ ಮೆಹಂದಿಯನ್ನು ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನ ಜಾಗೃತಿಯನ್ನು ಮೂಡಿಸುವ ಮೂಲಕ ವಿಶಿಷ್ಠ ಕಾರ್ಯಕ್ರಮ ಜರುಗಿತು.
ಗ್ರಾ.ಪಂಗಳಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಒಟ್ಟೂಗೂಡಿ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ವಿವಿಧ ಘೋಷಣೆಗಳ ಬರಹ, ಜಾಗೃತಿ ಮೂಡಿಸುವ ಅಲಂಕಾರಿಕ ಚಿತ್ರಗಳು ಮತ್ತು ಮೆಹಂದಿಯಲ್ಲಿ ವಿವಿಧ ಡಿಸೈನ್‌ಗಳನ್ನು ಗ್ರಾಮದ ಮಹಿಳೆಯರ ಕೈಯಲ್ಲಿ ಬಿಡಿಸುವ ಮೂಲಕ ಮೇ-7ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
ಮೇ 7ರಂದು ಮತದಾನ ಮಾಡು, ಚುನಾವಣಾ ಪರ್ವ ದೇಶದ ಗರ್ವ, ನನ್ನ ಮತ ನನ್ನ ಹಕ್ಕು, ನಿಮ್ಮ ಮತ ದೇಶಕ್ಕೆ ಹಿತ, ಕಡ್ಡಾಯವಾಗಿ ಮತದಾನ ಮಾಡಿ ಮತ್ತು ಮತದಾನ ನಮ್ಮ ಹಕ್ಕು ಎಂಬ ಘೋಷಣೆಗಳ ಬರಹಗಳನ್ನು ಮೆಹಂದಿ ಮೂಲಕ ಗ್ರಾಮದ ಮಹಿಳೆಯರಿಗೆ ಹಾಗೂ ತಮ್ಮ ಕೈಯಲ್ಲಿ ಬಿಡಿಸಿಕೊಂಡರು. ಮತದಾನ ಜಾಗೃತಿ ಕುರಿತಾದ ಚಿತ್ರಗಳನ್ನು ಕೈಯಲ್ಲಿ ಬಿಡಿಸಿಕೊಂಡು ಮತದಾನ ಜಾಗೃತಿ ಸಾರಿದರು. ಸಾರ್ವಜನಿಕರು ಕೂಡಾ ಮಹಿಳೆಯರು ಕೈಯಲ್ಲಿ ಬಿಡಿಸಿಕೊಂಡ ಮತದಾನದ ಚಿತ್ರಗಳನ್ನು ನೋಡಿ ಸಂತಸಪಟ್ಟರು.
ಗ್ರಾಮದ ಮಹಿಳೆಯರಿಗಾಗಿ ಹಮ್ಮಿಕೊಂಡ ಮೆಹಂದಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ಮಾತನಾಡಿ, ಮೆಹಂದಿ ಕೈಯಲ್ಲಿ ಬಿಡಿಸಿಕೊಳ್ಳುವುದು ಮಹಿಳೆಯರಿಗೆ ಇಷ್ಟವಾದ ಕೆಲಸ. ಮತದಾನ ಜಾಗೃತಿ ಕುರಿತು ಮಹಿಳೆಯರು ವಿವಿಧ ಬರಹಗಳನ್ನು ಕೈಯಲ್ಲಿ ಬಿಡಿಸಿಕೊಂಡು ಜಾಗೃತಿ ಮೂಡಿಸುವ ಕಾರಣದಿಂದ ಪ್ರತಿ ಮನೆಗೂ ಮತದಾನ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಕಾಯಕ ಮಿತ್ರ, ಕಾಯಕ ಬಂಧುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮದಲ್ಲೂ ವಿಭಿನ್ನವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಹಿಳಾ ಸಂಘಟನೆಗಳು ಮಾಡುತ್ತಿವೆ. ಇಂದು ಅಬ್ಬಿಗೇರಿ ಹೋಬಳಿ ಮಟ್ಟದಲ್ಲಿ ಮೆಹಂದಿ ಮೂಲಕ ಮತದಾನ ಜಾಗೃತಿ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿದ ಕಾರ್ಯ ಮಹಿಳಾ ಸಂಘಟನೆಗಳ ಹಾಗೂ ಎಲ್ಲಾ ಸದಸ್ಯರಿಗೂ ಖುಷಿ ತಂದಿದೆ ಎಂದು ಲೋಹಿತ ಎಂ ಅಭಿಪ್ರಾಯಪಟ್ಟರು.