ಬೆಂಗಳೂರು: ಕರ್ನಾಟಕದಲ್ಲಿ ಹೊಸ ಖಾಸಗಿ ಪದವಿಪೂರ್ವ (ಪಿಯು) ಕಾಲೇಜುಗಳನ್ನು ಆರಂಭಿಸಲು ಮುಂದಿನ ಮೂರು ಶೈಕ್ಷಣಿಕ ವರ್ಷಗಳವರೆಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಹಲವು ಪಿಯು ಕಾಲೇಜುಗಳಲ್ಲಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಸೀಟುಗಳು ಖಾಲಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜುಗಳ ಆರಂಭಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿದೆ.
ಹೊಸ ಕರಡು ಅಧಿಸೂಚನೆಯ ಪ್ರಕಾರ, 2027-28ನೇ ಶೈಕ್ಷಣಿಕ ವರ್ಷದಿಂದ 2029-30ನೇ ಶೈಕ್ಷಣಿಕ ವರ್ಷದವರೆಗೆ ರಾಜ್ಯದಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡದಿರಲು ಪ್ರಸ್ತಾಪಿಸಲಾಗಿದೆ. ಈ ಮೂಲಕ ಮುಂದಿನ ಮೂರು ಶೈಕ್ಷಣಿಕ ವರ್ಷಗಳ ಕಾಲ ಹೊಸ ಖಾಸಗಿ ಪದವಿಪೂರ್ವ ಕಾಲೇಜುಗಳ ಸ್ಥಾಪನೆಗೆ ತಾತ್ಕಾಲಿಕ ತಡೆ ವಿಧಿಸುವ ಉದ್ದೇಶ ಹೊಂದಲಾಗಿದೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿಯಮಗಳು-2024ಕ್ಕೆ ತಿದ್ದುಪಡಿ ತರುವ ಮೂಲಕ ಈ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗಳು, ನೋಂದಣಿ, ಆಡಳಿತ ಹಾಗೂ ಅನುದಾನ ಸೇರಿದಂತೆ ವಿವಿಧ ಅಂಶಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಈಗಾಗಲೇ 6,000ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಪ್ರತಿವರ್ಷ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಸೀಟುಗಳು ಖಾಲಿ ಉಳಿಯುತ್ತಿದ್ದು, ಹೊಸ ಕಾಲೇಜುಗಳಿಗೆ ಅನುಮತಿ ನೀಡುವುದರಿಂದ ಈಗಿರುವ ಕಾಲೇಜುಗಳ ದಾಖಲಾತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳ ಆರಂಭಕ್ಕೆ ನಿರ್ಬಂಧ ವಿಧಿಸುವಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿನ ಖಾಲಿ ಸೀಟುಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಉಪನ್ಯಾಸಕರ ಸಂಘದ ಮನವಿ ಹಾಗೂ ರಾಜ್ಯದಲ್ಲಿನ ಪಿಯು ಕಾಲೇಜುಗಳ ದಾಖಲಾತಿ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈಗಿರುವ ಕಾಲೇಜುಗಳಲ್ಲಿನ ಸೀಟುಗಳ ಬಳಕೆಗೆ ಆದ್ಯತೆ ನೀಡುವುದು ಹಾಗೂ ಅನಗತ್ಯವಾಗಿ ಹೊಸ ಕಾಲೇಜುಗಳ ಸಂಖ್ಯೆ ಹೆಚ್ಚಾಗುವುದನ್ನು ನಿಯಂತ್ರಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ.
ಇನ್ನು ಈ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸರ್ಕಾರ ಸದ್ಯ ಕರಡು ಅಧಿಸೂಚನೆಯನ್ನು ಮಾತ್ರ ಪ್ರಕಟಿಸಿದ್ದು, ಅಂತಿಮ ಆದೇಶ ಹೊರಡಿಸಿಲ್ಲ. ಕರಡು ಅಧಿಸೂಚನೆ ಕುರಿತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಸಂಬಂಧಪಟ್ಟವರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಸಾರ್ವಜನಿಕರಿಂದ ಸಲ್ಲಿಕೆಯಾಗುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ನಿಯಮ ಜಾರಿಗೆ ಬಂದರೆ 2027-28ರಿಂದ 2029-30ರವರೆಗೆ ರಾಜ್ಯದಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳನ್ನು ಆರಂಭಿಸಲು ಅನುಮತಿ ದೊರೆಯುವುದಿಲ್ಲ.










