ಮಂಗಳೂರು: ಕರಾವಳಿಯ ಪ್ರತಿಭಾವಂತ ಯುವಕನೊಬ್ಬ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ದೇಶಸೇವೆ ಸಲ್ಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಕಠಿಣ ಪರಿಶ್ರಮ,
ಶಿಸ್ತು ಹಾಗೂ ನಿರಂತರ ತರಬೇತಿಯ ಮೂಲಕ ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ವಿಮಾನವನ್ನು ಹಾರಿಸುವ ಹಂತಕ್ಕೆ ತಲುಪಿದ್ದಾರೆ. ಯುಪಿಎಸ್ಸಿ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ್ಯಾಂಕ್ ಗಳಿಸಿದ್ದ ಪ್ರಜ್ವಲ್, ಇದೀಗ ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ಕರಾವಳಿಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಅರೇಕಳ ಉಳಿಡೊಟ್ಟು ನಿವಾಸಿ ರಮೇಶ್ ಶೆಟ್ಟಿ ಹಾಗೂ ಕೋಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರರಾಗಿರುವ ಪ್ರಜ್ವಲ್ ಶೆಟ್ಟಿ, ಬಾಲ್ಯದಿಂದಲೇ ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊಂದಿದ್ದರು. ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಯುಪಿಎಸ್ಸಿ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಯಲ್ಲಿ 42ನೇ ರ್ಯಾಂಕ್ ಗಳಿಸಿ ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಪ್ರವೇಶ ಪಡೆದರು.
ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮೂರು ವರ್ಷಗಳ ಕಾಲ ಕಠಿಣ ಸೇನಾ ತರಬೇತಿ ಪಡೆದ ಪ್ರಜ್ವಲ್, ಈ ಅವಧಿಯಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದರು. ಇದೇ ಸಂದರ್ಭದಲ್ಲಿ ಸೂಪರ್ ಡಿಮೋನಾ ವಿಮಾನ ಹಾರಾಟದ ತರಬೇತಿ ಪಡೆದು ತಮ್ಮ ವೈಮಾನಿಕ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ತರಬೇತಿ ಪೂರ್ಣಗೊಳಿಸಿದ ಬಳಿಕ ಹೈದರಾಬಾದ್ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ವಿಶೇಷ ಹಾರಾಟ ತರಬೇತಿ ಪಡೆದರು. ಈ ವೇಳೆ ಪಿಲಾಟಸ್ ಹಾಗೂ ಕಿರಣ್ ವಿಮಾನಗಳನ್ನು ಹಾರಿಸುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ವಾಯುಯಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಇದೇ ಅವಧಿಯಲ್ಲಿ ಬಿ.ಟೆಕ್ ಪದವಿಯನ್ನೂ ಪಡೆದುಕೊಂಡರು.
ಡಿಸೆಂಬರ್ 2022ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್ಗೆ ಅಧಿಕೃತವಾಗಿ ಸೇರ್ಪಡೆಯಾದ ಪ್ರಜ್ವಲ್ ಶೆಟ್ಟಿ, ನಂತರ ಪಶ್ಚಿಮ ಬಂಗಾಳದ ಕಲೈಕುಂಡ ವಾಯುನೆಲೆಯಲ್ಲಿ ಹಾಕ್ ಜೆಟ್ ವಿಮಾನದ ವಿಶೇಷ ತರಬೇತಿ ಪಡೆದರು. ಈ ತರಬೇತಿಯಲ್ಲಿಯೂ ಅಗ್ರಸ್ಥಾನ ಗಳಿಸುವ ಮೂಲಕ ತಮ್ಮ ಹಾರಾಟ ಕೌಶಲ್ಯವನ್ನು ಪ್ರದರ್ಶಿಸಿದರು.
ವಿವಿಧ ಹಂತಗಳ ಕಠಿಣ ತರಬೇತಿ ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಪ್ರಜ್ವಲ್ ಶೆಟ್ಟಿ ಅವರಿಗೆ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ಹಾರಿಸುವ ಅವಕಾಶ ಲಭಿಸಿತು. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿರುವ ಭಾರತೀಯ ವಾಯುಪಡೆಯ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆ್ಯರೋಸ್’ ಪಡೆಯ ಭಾಗವಾಗಿರುವ ಅವರು, ರಫೇಲ್ ವಿಮಾನದ ವಿಶೇಷ ಕನ್ವರ್ಷನ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಸಂಪೂರ್ಣ ಕಾರ್ಯಾಚರಣೆಗೆ ಅರ್ಹತೆ ಪಡೆದ ರಫೇಲ್ ಯುದ್ಧ ವಿಮಾನದ ಪೈಲಟ್ ಆಗಿ ದೇಶಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ವಾಯುಪಡೆಯ 94ನೇ ಸಂಸ್ಥಾಪನಾ ದಿನದ ಅಂಗವಾಗಿ ವಾರಾಣಸಿಯಲ್ಲಿ ಆಯೋಜಿಸಲಾಗಿದ್ದ ‘ವಿಂಗ್ಸ್ ಓವರ್ ಗಂಗೆ’ ವೈಮಾನಿಕ ಪ್ರದರ್ಶನದಲ್ಲಿಯೂ ಪ್ರಜ್ವಲ್ ಶೆಟ್ಟಿ ತಮ್ಮ ಹಾರಾಟ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಮೂರು ರಫೇಲ್ ಯುದ್ಧ ವಿಮಾನಗಳನ್ನು ಒಳಗೊಂಡಿದ್ದ ‘ನೀಲಕಂಠ’ ಫಾರ್ಮೇಷನ್ನಲ್ಲಿ ಮಧ್ಯಭಾಗದ ಪ್ರಮುಖ ಸ್ಥಾನದಲ್ಲಿ ವಿಮಾನ ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ವೈಮಾನಿಕ ಪ್ರದರ್ಶನದಲ್ಲಿ ಅತ್ಯಂತ ನಿಖರವಾಗಿ ವಿಮಾನ ಹಾರಿಸುವ ಮೂಲಕ ತಮ್ಮ ತರಬೇತಿ, ಸಾಮರ್ಥ್ಯ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಅನ್ನು ಹಾರಿಸುವ ಅವಕಾಶ ಪಡೆದಿರುವ ಪ್ರಜ್ವಲ್ ಶೆಟ್ಟಿ ಅವರ ಸಾಧನೆ ಕರಾವಳಿಯ ಯುವಜನತೆಗೆ ಸ್ಫೂರ್ತಿಯಾಗಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಯುವಕನೊಬ್ಬ ನಿರಂತರ ಪರಿಶ್ರಮ, ಶಿಸ್ತು ಹಾಗೂ ದೃಢಸಂಕಲ್ಪದ ಮೂಲಕ ಭಾರತೀಯ ವಾಯುಪಡೆಯ ರಫೇಲ್ ಪೈಲಟ್ ಆಗಿ ಹೊರಹೊಮ್ಮಿರುವುದು ಮಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕವೇ ಹೆಮ್ಮೆಪಡುವ ಸಾಧನೆಯಾಗಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಯುವಜನತೆಗೆ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರ ಸಾಧನೆಯ ಪಯಣ ಮಾದರಿಯಾಗಿದೆ.









