ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣವು ಸೃಜನತೆಯೊಂದಿಗೆ ನಮ್ಮಲ್ಲಿ ಉತ್ತಮ ಮೌಲ್ಯಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಆದರ್ಶಗಳನ್ನು ರೂಢಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ಚಿಂತಕಿ ಸುಜಾತಾ ಆರ್.ಗುಡಿಮನಿ ಹೇಳಿದರು.
ಅವರು ಸೋಮವಾರ ಬೆಟಗೇರಿಯ ಸರಕಾರಿ ಮಾದರಿ ಶಾಲೆ ನಂ. 1ರಲ್ಲಿ ವಿದ್ಯಾರ್ಥಿಗಳಿಗೆ ಟೈ-ಬೆಲ್ಟ್ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಸರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ನೀಡುತ್ತಿದ್ದು, ಅದರೊಂದಿಗೆ ಟೈ-ಬೆಲ್ಟ್ಗಳನ್ನು ಧರಿಸಿ ಶಿಸ್ತಿನಿಂದ ಶಾಲೆಗೆ ಹೋಗಿ ಪರಿಶ್ರಮದಿಂದ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ಸರಕಾರಿ ಶಾಲೆಗಳ ಸಬಲೀಕರಣ ಆಗಲು ಚಿಂತಕರ ಸಹಕಾರ ಅವಶ್ಯವಾಗಿದ್ದು, ಸುಜಾತಾ ಶರಣಬಸಪ್ಪ ಗುಡಿಮನಿ ಈ ಶಾಲೆಯ ಮಕ್ಕಳಿಗೆ ಟೈ-ಬೆಲ್ಟ್ಗಳನ್ನು ದೇಣಿಗೆಯಾಗಿ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯೆ ಗೀತಾ ಜವಳಿ ವಹಿಸಿ ಮಾತನಾಡಿ, ಇದು ಶತಮಾನ ಕಂಡ ಶಾಲೆಯಾಗಿದ್ದು, ಇದಕ್ಕೆ ದಾನಿಗಳ ಹಾಗೂ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಾಯ-ಸಹಕಾರ ಅವಶ್ಯವಾಗಿದೆ ಎಂದರು.
ಅರುಂಧತಿ ಹಾಗೂ ಸಾನ್ವಿ ಪ್ರಾರ್ಥಿಸಿದರು. ಎಂ.ಎಚ್. ಇಚ್ಚಂಗಿ ಸ್ವಾಗತಿಸಿದರು. ಎಸ್.ವ್ಹಿ. ಕೇಸರಿ ನಿರೂಪಿಸಿದರು. ಜಿ.ಸಿ. ಜವಳಿ ವಂದಿಸಿದರು.



