Homeculture'ಜೋಕುಮಾರ ಬಂದಾನ ಬರ‍್ರೀ'

‘ಜೋಕುಮಾರ ಬಂದಾನ ಬರ‍್ರೀ’

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಜೋಕುಮಾರ ಬಂದಾನವ್ವಾ ಜೋಕಮಾರ! ಜೋಳ ಹಾಕ್ರಿ ಎಂದು ಹಾಡುತ್ತಾ ಆಚರಿಸುವ ಈ ವಿಶಿಷ್ಟ ಹಬ್ಬವನ್ನು ಅನಂತನ ಹುಣ್ಣಿಮೆಯ ಮುಂಗಾರು ಸುಗ್ಗಿ ಮತ್ತು ಹಿಂಗಾರು ಬಿತ್ತನೆಯ ನಡುವೆ ಜೋಕಮಾರನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಚತುರ್ಥಿಯಲ್ಲಿ ಗಣೇಶ ಮಳೆಯನ್ನು ತರದಿದ್ದರೂ ಜೋಕಮಾರ ಸ್ವಾಮಿ ಮಳೆ ತರುತ್ತಾನೆ ಎನ್ನುವುದು ರೈತರ ನಂಬಿಕೆ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಮಹಿಳೆಯರು ಮಣ್ಣಿನಿಂದ ಮಾಡಿದ ಜೋಕಮಾರನ ಮೂರ್ತಿಯನ್ನು ದವಸ ಧಾನ್ಯ ತುಂಬಿದ ಪುಟ್ಟಿಯಲ್ಲಿಟ್ಟುಕೊಂಡು ಜಾನಪದಗಳನ್ನು ಹಾಡುತ್ತಾ ಮನೆ-ಮನೆಗೆ ತೆರಳುವ ಮೂಲಕ ಗ್ರಾಮೀಣ ಮಹಿಳೆಯರು ‘ಜೋಕುಮಾರ ಬಂದಾನ ಬರ‍್ರೀ’ ಎಂದು ಪಟ್ಟಣ ಸೇರಿ ಗ್ರಾಮಗಳ ಬೀದಿ ಬೀದಿಗಳಲ್ಲಿ ಸಂಚರಿಸಿ, ಮನೆಯವರನ್ನು ಕರೆದು ಪೂಜೆ ಮಾಡುತ್ತಾರೆ.

ಪೂಜೆಯ ಸಂದರ್ಭದಲ್ಲಿ ಜೋಕುಮಾರನ ಕುರಿತು `ತಿಂಗಳಿಗೊಮ್ಮೆ ಬರುವನಲ್ಲ ತಾಯವ್ವ, ತಂದು ನೀಡವ್ವ ಮರತುಂಬ’ ಎಂದು ಜೋಕುಮಾರನನ್ನು ಹೊತ್ತು ತಂದ ಕೊಡಗಾನೂರ ಗ್ರಾಮದ ಬಾಳವ್ವ ತಳವಾರ, ರೇಣವ್ವ ತಳವಾರ, ಲಕ್ಷ್ಮವ್ವ ವಾಲ್ಮೀಕಿ, ಶರಣವ್ವ ವಾಲ್ಮೀಕಿ ಹಾಡು ಹೇಳುತ್ತಾರೆ.

ಕೈಯಲ್ಲಿ ಕತ್ತಿಯನ್ನು ಹಿಡಿದು, ಅಗಲವಾದ ಮುಖ, ಚೂಪಾದ ಮೂಗು, ಆಕರ್ಷಕ ಕಣ್ಣುಗಳಿಗೆ ತಕ್ಕಂತೆ ಹಣೆಗೆ ವಿಭೂತಿ, ಕುಂಕುಮ ಹಚ್ಚಿ, ತೆಲೆಗೆ ರುಮಾಲು ಸುತ್ತಿ ಅಲಂಕೃತಗೊಳಿಸಿದ ಜೋಕಮಾರನನ್ನು ಹೊತ್ತು ತರುವಾಗ ಹಿಂದೆ ಮಹಿಳೆಯರ ತಂಡವು ಜೋಕಮಾರ ಸ್ವಾಮಿಯ ಪೂಜೆಗಾಗಿ ಮನೆಯವರು ಮೊರದಲ್ಲಿ ಜೋಳ, ಗೋಧಿ, ಸಜ್ಜಿ, ಕಡಲೆ ಸೇರಿದಂತೆ ವಿವಿಧ ಧಾನ್ಯಗಳು, ಉಪ್ಪು ಮೆಣಸಿನಕಾಯಿ, ಕೊಬ್ಬರಿ ಬಟ್ಟಲು, ಎಲೆ-ಅಡಿಕೆ ಬುಟ್ಟಿಯಲ್ಲಿ ಹಾಕಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಅದಕ್ಕೆ ಪ್ರತಿಯಾಗಿ ನುಚ್ಚನ್ನು ಪ್ರಸಾದದ ರೂಪದಲ್ಲಿ ನಂಬಿದ ಭಕ್ತರಿಗೆ ನೀಡುತ್ತಾರೆ. ಹೀಗೆ ಸ್ವಾಮಿಗೆ ಮೊರದಲ್ಲಿ ದವಸ ಧಾನ್ಯಗಳನ್ನು ಹಾಕಿ, ಆತನ ಬಾಯಿಗೆ ಬೆಣ್ಣೆ ಹಚ್ಚುತ್ತಾರೆ. ಜೋಕಮಾರನ ಬಾಯಿಗೆ ಸವರಿದ ಬೆಣ್ಣೆಯನ್ನು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣು ಬೇನೆ ಬರುವುದಿಲ್ಲ ಎಂದು ಕೊಡಗಾನೂರ ಗ್ರಾಮದ ಶರಣವ್ವ ವಾಲ್ಮೀಕಿ ಕುಟುಂಬದ ಮಹಿಳೆಯರು ಹೇಳುತ್ತಾರೆ.

ಗಣೇಶನ ವಿಸರ್ಜನೆಯ ಮರುದಿನವೇ ಈ ಹಬ್ಬ ಆಚರಿಸುವುದರಿಂದ ಜೋಕಮಾರಸ್ವಾಮಿಯ ಕಣ್ಣಿಗೆ ವಿನಾಯಕ ಕಾಣಬಾರದು ಎಂದುಕೊಂಡು ಮೂರ್ತಿಗೆ ಮರೆ ಮಾಡುತ್ತಾರೆ. ಅಲ್ಲಿಂದ ಮೂರು ದಿನಗಳ ಕಾಲ ಮಡಿವಾಳರು ಬಟ್ಟೆ ತೊಳೆಯುವ ಸ್ಥಳದಲ್ಲಿ ಹೋಗುವದಿಲ್ಲವಂತೆ. ಒಟ್ಟಾರೆ ಮಳೆ-ಬೆಳೆ ಸರಿಯಾಗಿ ಬರುತ್ತದೆ ಎಂಬ ನಂಬಿಕೆಯಿಂದ, ಶ್ರದ್ಧಾಭಕ್ತಿಯಿಂದ ಮಣ್ಣಿನ ಹಬ್ಬಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img