HomeGadag Newsಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಸುರಿಮಳೆ: ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳಿಗೆ ಸಚಿವ ಪಾಟೀಲ ಸೂಚನೆ

ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಸುರಿಮಳೆ: ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳಿಗೆ ಸಚಿವ ಪಾಟೀಲ ಸೂಚನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಸುರಿಮಳೆಯೇ ಹರಿಯಿತು.

ಮಹಾಂತೇಶ ನಿಲೂವಳಗಿ ಅವರು ಗದಗ ನಗರದ 22ನೇ ವಾರ್ಡ್ನಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಬೀದಿ ದೀಪದ ಸೌಲಭ್ಯಗಳಿಲ್ಲ ಎಂದು ಹೇಳಿದರು. ಪ್ರತಿಯಾಗಿ ಸ್ಪಂದಿಸಿದ ಸಚಿವರು, 15 ದಿನದೊಳಗೆ ನೀರು ಮತ್ತು ವಿದ್ಯುತ್ ದೀಪದ ಸಮಸ್ಯೆಯನ್ನು ಪರಿಸರಿಸಬೇಕು ಎಂದು ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು.

ರಾಮಮೂರ್ತಿ ಕುಲಕರ್ಣಿಯವರು ಗದಗದಿಂದ ರೋಣ, ಗಜೇಂದ್ರಗಡ ಹೋಗುವ ಬಸ್‌ಗಳು ಹೊಸ ಬಸ್ ನಿಲ್ದಾಣದಿಂದ ಹೋಗುತ್ತಿದ್ದು, ಹಳೆಯ ಬಸ್ ನಿಲ್ದಾಣಕ್ಕೆ ಬರುವುದಿಲ್ಲ ಎಂದರು.

ಪ್ರತಿಯಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿ ಹಳೆಯ ಬಸ್ ನಿಲ್ದಾಣಕ್ಕೆ ಹೋಗುವುದರಿಂದ ಘಟಕಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು. ಇದನ್ನು ಆಲಿಸಿದ ಸಚಿವರು, ಒಂದು ತಿಂಗಳು ಗದಗ ಘಟಕದಿಂದ ಗಜೇಂದ್ರಗಡ, ರೋಣಕ್ಕೆ ಹೋಗುವ ಬಸ್‌ಗಳನ್ನು ಹಳೆಯ ಬಸ್ ನಿಲ್ದಾಣಕ್ಕೂ ಕಳುಹಿಸಿ. ಅದಾದ ನಂತರವೂ ಘಟಕಕ್ಕೆ ಹಾನಿ ಆದಲ್ಲಿ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ನಗರ ಸಾರಿಗೆ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ವೀರಪ್ಪ ಸೌಲಿ ಅವರು ತಮ್ಮ ಹೊಲದಿಂದ ಮುಖ್ಯ ರಸ್ತೆಗೆ ಯಾವುದೇ ಸಂಪರ್ಕವಿಲ್ಲ. ಬೆಳೆದ ಫಸಲನ್ನು ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಯಾಗಿ ಸಚಿವರು ಕೂಡಲೇ ಗ್ರಾಮ ನಕ್ಷೆಯನ್ನು ಪರಿಶೀಲಿಸಿ, ಹೊಲಕ್ಕೆ ಹೋಗುವ ಮಾರ್ಗವನ್ನು ಮಾಡಬೇಕೆಂದು ತಹಸೀಲ್ದಾರರಿಗೆ ಸೂಚಿಸಿದರು.

ಬಸವರಾಜ ನೀಲಗುಂದ ಅವರು ಮೇಕೆ ದೊಡ್ಡಿಯನ್ನು ನಿರ್ಮಿಸಿಕೊಂಡಿದ್ದು, ಇದುವರೆಗೆ ಯಾವುದೇ ರೀತಿಯ ಅನುದಾನ ದೊರೆತಿಲ್ಲ ಎಂದರು. ಈ ಸಮಸ್ಯೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸಚಿವರು, ಕುರಿ ದೊಡ್ಡಿ ಮತ್ತು ದನದ ದೊಡ್ಡಿಯ ಹಣವನ್ನು ನೇರವಾಗಿ ಫಲಾನುಬಾವಿಗಳಿಗೆ ಶೀಘ್ರವೇ ನೀಡಬೇಕು ಎಂದು ಜಿ.ಪಂ ಸಿಇಒ ಅವರಿಗೆ ಆದೇಶಿಸಿದರು.

ಆರ್.ಬಿ. ತಳವಾರ ಅವರು ಗಂಗಾಕಲ್ಯಾಣ ಅರ್ಜಿ ಸಲ್ಲಿಸಿದ್ದು ಅದನ್ನು ತಡೆಹಿಡಿಯಲಾಗಿದೆ ಎಂದರು. ಇದಕ್ಕೆ ಪ್ರತಿಯಾಗಿ ಸಚಿವರು ಈ ಅರ್ಜಿಯನ್ನು ಪರಿಶೀಲನೆ ಮಾಡಿ ಆದಷ್ಟು ಬೇಗನೆ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

District Level Janata Darshan Programme

ಹೊಂಬಳ ಗ್ರಾಮದ ಫಕ್ರುಸಾಬ ಮುಲ್ಲಾ ಅವರು, 50 ವರ್ಷದಿಂದ ಗ್ರಾಮಸ್ಥರು ಬಣವಿಯನ್ನು ಇಟ್ಟುಕೊಂಡಿದ್ದು ಈಗ ಪೊಲೀಸರು ತೆರವು ಮಾಡಲು ಹೇಳುತ್ತಿದ್ದಾರೆ. ಇದ್ದಕೆ ಪರಿಹಾರ ಸೂಚಿಸಿ ಎಂದರು. ಸಮಸ್ಯೆ ಆಲಿಸಿದ ಸಚಿವರು, ಈ ಪ್ರಕರಣವನ್ನು ಕೂಡಲೇ ಪರಿಶೀಲಿಸಿ 15 ದಿನದೊಳಗೆ ತಾರ್ಕಿಕ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಂತಮ್ಮ ಅವರು ನಗರದ ರೇಣುಕಾ ನಗರದಲ್ಲಿ ಬಂಗಿ ರಸ್ತೆ ಎಂದು ಇರುವ ಜಾಗವನ್ನು ಅನಧಿಕೃತವಾಗಿ ಅತಿಕ್ರಮಿಸುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಸಚಿವರು 2 ದಿನದೊಳಗೆ ನಗರಸಭೆ ಆಯುಕ್ತರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪೌರಾಯುಕ್ತರಿಗೆ ಆದೇಶಿಸಿದರು.
ಬಸಪ್ಪ ಪತ್ತಾರ ಅವರು 2002ನೇ ಇಸವಿಯಲ್ಲಿ ರಾಜೀವಗಾಂಧಿ ನಿಗಮಕ್ಕೆ ವಸತಿ ನಿಲಯ ನಿರ್ಮಾಣಕ್ಕೆ ಜಾಗ ನೀಡಿದ್ದು, ಇದುವರೆಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದರು. ಪ್ರತಿಯಾಗಿ ಸಚಿವರು ಒಂದು ತಿಂಗಳೊಳಗೆ ಪ್ರಕರಣವನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಾಜೀವ ಗಾಂಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ವಿ.ಆರ್. ಹೀರೆಮಠ ಅವರು ನಗರದ 33ನೇ ವಾರ್ಡ್ ಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲದಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಸಚಿವರು ಕೂಡಲೇ ಬೀದಿ ದೀಪವನ್ನು ಅಳವಡಿಸಬೇಕೆಂದು ನಗರಸಭೆ ಪೌರಾಯುಕ್ತರಿಗೆ ಆದೇಶಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!