HomeGadag Newsಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿ

ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾಡಳಿತ ಭವನ, ಎಸ್.ಪಿ. ಕಚೇರಿ, ಎಸಿ ಕಚೇರಿ, ಜಿಮ್ಸ್ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನವನ ಅಭಿವೃದ್ಧಿಪಡಿಸಿ ನಿರ್ವಹಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ 7 ತಾಲೂಕುಗಳಲ್ಲಿ ತಲಾ ಒಂದು ಲಕ್ಷ ಗಿಡ ನೆಡುವ ಕೆಲಸವಾಗಬೇಕು. ಸಸಿ ನೆಡುವ ಕಾರ್ಯಕ್ರಮದ ಯೋಜನೆ ತಯಾರಿಸಿ ವಿವರವಾದ ಮಾಹಿತಿಯೊಂದಿಗೆ ಆಯಾ ತಾಲೂಕಿನ ಜನಪ್ರತಿನಿಧಿಗಳ ಮಾರ್ಗದರ್ಶನ ಪಡೆದು ಕೆಲಸ ನಿರ್ವಹಿಸಬೇಕು ಎಂದರು.

ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಅನಿರೀಕ್ಷಿತವಾಗಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮನೆ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಜೆ.ಜೆ.ಎಂ. ಯೋಜನೆಯಡಿ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಬೇಕು. ನೀರು ವೃಥಾ ಪೋಲಾಗದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಮರ್ಪಕವಾಗಿ ಆಗಬೇಕು ಎಂದರು.

ಸರ್ಕಾರ ವಿವಿಧ ಇಲಾಖೆಗಳ ಸ್ಥಿರಾಸ್ತಿ ಸಂರಕ್ಷಣೆ ಜವಾಬ್ದಾರಿಯು ಸಂಬಂಧಿತ ಅಧಿಕಾರಿಯದ್ದಾಗಿರುತ್ತದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ಕಡೆ ಹೆಚ್ಚು ಗಮನ ಹರಿಸಬೇಕು. ಜಿಲ್ಲೆಯು ಉನ್ನತ ಸ್ಥಾನದಲ್ಲಿ ಬರಲು ಕ್ರಿಯಾ ಯೋಜನೆ ರೂಪಿಸಬೇಕು. ಇತ್ತೀಚೆಗೆ ಸುರಿದ ಮಳೆಯಿಂದ ಬೆಟಗೇರಿಯ ಟರ್ನಲ್ ಪೇಟೆಯಲ್ಲಿನ ರಸ್ತೆಯಲ್ಲಿನ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ನಗರಸಭೆಯವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಮಳೆ ನೀರು ಗಟಾರುಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ರೈತರಿಗೆ ವಿತರಿಸಲಾಗುವ ರಸಗೊಬ್ಬರದ ಗುಣಮಟ್ಟದ ಪರೀಕ್ಷೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ ಮಾಡುವಾಗ ವಿನಾಕಾರಣ ವಿಳಂಬ ಮಾಡಬಾರದು ಎಂದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಮರ್ಪಕ ರೀತಿಯಲ್ಲಿ ಆಗಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ಹಮ್ಮಿಗಿಯಲ್ಲಿ ನೀರು ಪೂರೈಕೆಯ ಪೈಪ್‌ಲೈನ್ ದುರಸ್ತಿಯಿದ್ದು, ರಿಪೇರಿಗಾಗಿ ವಿವರವಾದ ಪ್ರೊಜೆಕ್ಟ್ ತಯಾರು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, ಜಿಲ್ಲೆಯಲ್ಲಿ ಸೆಪ್ಟೆಂಬರ್ 25ರವರೆಗೆ ವಾಡಿಕೆ ಮಳೆ 467 ಮಿ.ಮೀ ಇದ್ದು, ವಾಸ್ತವ ಮಳೆ 424 ಮಿ.ಮೀ ಆಗಿರುತ್ತದೆ. 311771 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ರೈತರಿಗೆ ವಿತರಣೆಗೆ 12504 ಮೆಟ್ರಿಕ್ ಟನ್ ರಸಗೊಬ್ಬರದ ಲಭ್ಯತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತೋಟಗಾರಿಕೆ, ಶಿಕ್ಷಣ, ಜೆಜೆಎಮ್, ಹೆಸ್ಕಾಮ್ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿಲ್ಲಾ ಗ್ಯಾರಂಟಿ ಯೊಜನೆಯ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧಿಕಾರೇತರ ಸದಸ್ಯರಾದ ಎಸ್.ಎನ್. ಬಳ್ಳಾರಿ, ಪ್ರಭು ಮೇಟಿ, ಎಸ್.ಡಿ. ಮಕಾನದಾರ, ಶಾರದಾ ಹಿರೇಗೌಡರ, ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಅಕಾಲಿಕ ಮಳೆಯಿಂದ ಹಾನಿಗೊಳಗಾದ ತೋಟಗಾರಿಕಾ ಪ್ರದೇಶದ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿ ಶೀಘ್ರವಾಗಿ ವಿಲೇವಾರಿಯಾಗುವಂತೆ ಕ್ರಮ ಕೈಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಸಕಾಲ ಯೋಜನೆಯಡಿ ಸ್ವಿಕೃತ ಅರ್ಜಿಗಳು ನಿಗದಿತ ಕಾಲದಲ್ಲಿಯೇ ವಿಲೇವಾರಿಯಾಗುತ್ತಿದ್ದು, ರಾಜ್ಯದಲ್ಲಿಯೇ ಜಿಲ್ಲೆಯು ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದರು.

ಗದಗ ತಾಲೂಕಿನಲ್ಲಿ ಸುಮಾರು 8 ಗ್ರಾಮಗಳಲ್ಲಿ ಸ್ಮಶಾನದ (ರುದ್ರಭೂಮಿಯ) ಸಮಸ್ಯೆಯಿದ್ದು, ಈ ಕುರಿತು ನವೆಂಬರ್ 1ರೊಳಗೆ ರುದ್ರಭೂಮಿಗೆ ಸ್ಥಳ ಗುರುತಿಸಿ ಕ್ರಮ ಕೈಗೊಳ್ಳಬೇಕು. ರುದ್ರಭೂಮಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರುವ ಹಾಗೆ ನೊಡಿಕೊಳ್ಳಬೇಕು. ಸಾರ್ವಜನಿಕರಿಗೆ ಪಡಿತರ ಚೀಟಿ ವಿತರಣೆ ಮಾಡುವಾಗ ಯಾವುದೇ ಅವ್ಯವಹಾರ ಆಗದಂತೆ ನೋಡಿಕೊಳ್ಳಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!