ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಏಕೀಕರಣ ಚಳವಳಿಯಿಂದ ಹಿಡಿದು ಕರ್ನಾಟಕ ನಾಮಕರಣದವರೆಗೂ ನಡೆದ ಚಟುವಟಿಕೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಅವಿಸ್ಮರಣೀಯ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗಾಂಧಿ ವೃತ್ತದ ಸಮೀಪ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ್ರ ಬಣ)ಯ ಗದಗ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗದಗ ಕನ್ನಡೋತ್ಸವ, ಸಾಂಸ್ಕೃತಿಕ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿಗೆ ನಾಂದಿ ಹಾಡಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಬರೆದ ಹುಯಿಲಗೋಳ ನಾರಾಯಣರಾಯರು, ಚಳವಳಿಯ ಮುಂಚೂಣಿಯಲ್ಲಿದ್ದ ಅಂದಾನೆಪ್ಪ ದೊಡ್ಡಮೇಟಿಯವರು ಗದಗ ಜಿಲ್ಲೆಯವರು. ಸಂಗೀತದಲ್ಲಿ ಭಾರತ ರತ್ನ ಪಡೆದ ಪಂ.ಭೀಮಸೇನ ಜೋಶಿ ಅವರು ಗದಗನವರು. ಕರ್ನಾಟಕ ನಾಮಕರಣಕ್ಕೆ ಬೀಜಾಂಕುರ ಮಾಡಿದ್ದು ಗದಗನವರೇ ಆದ ಕೆ.ಎಚ್. ಪಾಟೀಲರು. ಅಷ್ಟೇ ಏಕೆ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಚಳವಳಿಗೆ ಬಲ ತುಂಬಿದ ಲಿಂ.ಜ.ಡಾ. ತೋಂಟದ ಸಿದ್ಧಲಿಮಗ ಶ್ರೀಗಳು ಕೂಡ ಗದಗ ನೆಲದವರೇ. ಹೀಗಾಗಿ ಗದಗ ಜಿಲ್ಲೆಯವರು ವಿಶೇಷ ಎಂದು ಹೇಳಿದರು.
ಕನ್ನಡ ಭಾಷಿಕರು ಒಂದಾಗಬೇಕು ಎಂದು ಕರ್ನಾಟಕ ಏಕೀಕರಣ ಮಾಡಿದ ಸತ್ವಯುತ ನೆಲ ನಮ್ಮದು. ಮೈಸೂರು ರಾಜ್ಯದಿಂದ ‘ಕರ್ನಾಟಕ ನಾಮಕರಣ’ ಸಂಭ್ರಮದ ಮೂರು ದಿನಗಳಲ್ಲಿ ಗದಗನಲ್ಲೂ ಒಂದು ದಿನ ನಡೆದಿತ್ತು. ಇದೀಗ ಆ ಸಂಭ್ರಮಕ್ಕೆ 50 ವರ್ಷ ತುಂಬಿದ್ದಕ್ಕೆ ಕಳೆದ ವರ್ಷ ಅದೇ ವೈಭವ ಮರುಕಳಿಸಿತ್ತು. ಕನ್ನಡ ನಾಡು, ನುಡಿಗಾಗಿ ಶ್ರೇಷ್ಠ, ದೊಡ್ಡ ಮೆರವಣಿಗೆ ಗದಗ ನೆಲದಲ್ಲಿ ನಡೆದಿದೆ. ಇದು ಇತಿಹಾಸ ಎಂದರು.
ಪ್ರವಾಸೋದ್ಯಮಕ್ಕೆ ಉತ್ತರ ಕರ್ನಾಟಕದಲ್ಲಿ ಇರುವ ಅವಕಾಶ ಬೇರೆಲ್ಲೂ ಇಲ್ಲ. ಲಕ್ಕುಂಡಿಯಲ್ಲಿ ನಡೆದ ಪ್ರಾಚ್ಯಾವಶೇಷಗಳ ಅಭಿಯಾನದ ವೇಳೆ ಮಾಡಿಕೊಂಡ ಮನವಿಗೆ ಅಲ್ಲಿನ ಜನ ಉತ್ತಮವಾಗಿ ಸ್ಪಂದಿಸಿ, 1200 ಪ್ರಾಚ್ಯಾವಶೇಷಗಳನ್ನು ನೀಡಿದ್ದಾರೆ. 300 ಕ್ಕೂ ಹೆಚ್ಚು ನಾಣ್ಯಗಳು ಲಭಿಸಿವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಜ.ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಮನ ತಣಿಸುವ ಅಮೃತ ಕನ್ನಡ ಭಾಷೆಯಲ್ಲಿ ಇದೆ. ಕನ್ನಡ ಭಾಷೆ ಬಗ್ಗೆ ತಾಯಿಯಷ್ಟೇ ಅಭಿಮಾನ ಇರಬೇಕು, ಗೌರವ ಇರಬೇಕು. ತಾಯಿ ನಿರ್ಲಕ್ಷಿಸಿದರೆ ಸೊರಗಿ, ಸಾಯುತ್ತಾಳೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆ ರೋಣ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಮಾತನಾಡಿ, ಕರವೇ ನೇತೃತ್ವದಲ್ಲಿ ಸಂಘಟಿತರಾಗಿ ಕನ್ನಡ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.
ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಹೆಚ್.ಎಸ್. ಸೋಂಪೂರ ಅವರು ಮಾತನಾಡಿ, ತಾಯಿ ಭುವನೇಶ್ವರಿ ಮೂಲ ಚಿತ್ರ ಪರಿಕಲ್ಪನೆ, ಅದನ್ನು ರಚಿಸಿದ್ದು ಗದಗನವರು. ಮುಂಬೈ ವಿಧಾನಸಭೆಯಲ್ಲಿ ಕನ್ನಡ ಕಂಪು ಹರಡಿದ ಕೀರ್ತಿ ಅಂದಾನೆಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣದಲ್ಲಿ ಗದಗ ನೆಲವೇ ಬೀಜ ಬಿತ್ತಿದ್ದು. ಇದಕ್ಕೆ ಕೆ.ಎಚ್. ಪಾಟೀಲರೇ ಕಾರಣ ಎಂದರು.
ಉಸಿರು ಫೌಂಡೇಶನ್ ಅಧ್ಯಕ್ಷ ಶರಣ ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ, ಕರವೇ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಮುಳಗುಂದ ಪ.ಪಂ ಸದಸ್ಯ ಬಸವರಾಜ ಹಾರೋಗೇರಿ, ಬಸವರಾಜ ಕಡೇಮನಿ, ಹನಮಂತಪ್ಪ ಮೇಟಿ, ಆಶಾ ಜೂಲಗುಡ್ಡ ಸೇರಿ ಹಲವರು ವೇದಿಕೆಯಲ್ಲಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ. ಬಿಡಿನಹಾಳ, ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಸುರೇಶ, ಧಾರವಾಡ ವಿವಿಯಿಂದ ಕನ್ನಡ ಎಂ.ಎ. ವಿಭಾಗದಲ್ಲಿ ಚಿನ್ನದ ಪದಕ ಪಡೆದ ಪೂಜಾ, ಸಿ.ಎಸ್. ಪಾಟೀಲ ಶಾಲೆಯ ಶಿಕ್ಷಕ ಶಂಕ್ರಪ್ಪ ಗುಜಮಾಗಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೃಷ್ಣ ಲಮಾಣಿ ಸ್ವಾಗತಿಸಿದರು. ನಿಂಗನಗೌಡ ಮಾಲೀಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



