ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಮೋಹನ್ ಬಾಬು ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ನಟನೆಯ ಬಹುನಿರೀಕ್ಷಿತ “ಕಣ್ಣಪ್ಪ” ಚಿತ್ರದ “ಶಿವಶಿವ ಶಂಕರ” ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಬಾಬು, ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಮುಂತಾದ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಭಾರತಿ ವಿಷ್ಣುವರ್ಧನ್, ಶ್ರೀಮತಿ ಸುಮಲತ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಮೋಹನ್ ಬಾಬು, ಶ್ರೀರವಿಶಂಕರ್ ಗುರೂಜಿ ಅವರು ನನ್ನ ಮಗ ವಿಷ್ಣು ಮಂಚು ಅಭಿನಯದ “ಕಣ್ಣಪ್ಪ” ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಅವರಿಗೆ ಅನಂತ ಧನ್ಯವಾದ. ಇನ್ನು, ನನ್ನ ಆತ್ಮೀಯ ಗೆಳೆಯರಾದ ವಿಷ್ಣುವರ್ಧನ್ ಹಾಗು ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತ ಅಂಬರೀಶ್ ಅವರು ಬಂದಿರುವುದು ಬಹಳ ಖುಷಿಯಾಗಿದೆ. ರಾಕ್ ಲೈನ್ ವೆಂಕಟೇಶ್ ಅವರು ಕರ್ನಾಟಕದಲ್ಲಿ “ಕಣ್ಣಪ್ಪ” ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಟ ವಿಷ್ಣು ಮಂಚು ಮಾತನಾಡಿ, ಹಾಡು ಬಿಡುಗಡೆ ಮಾಡಿಕೊಟ್ಟ ಗುರೂಜಿ ಅವರಿಗೆ, ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಧನ್ಯವಾದ. ನಮ್ಮ ಚಿತ್ರ ಏಪ್ರಿಲ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದರು.