ಬೆಂಗಳೂರು:- ತುಮಕೂರಿನಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ಮುಂದುವರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯಾವ ವಿಚಾರಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಡಿ ಅಧಿಕಾರಿಗಳು ನಮ್ಮ ಸಂಸ್ಥೆಯ ಅಕೌಂಟ್ಸ್ ಕೇಳಿದ್ದಾರೆ. ಯಾವ ವರ್ಷದ ಲೆಕ್ಕ ಕೇಳುತ್ತಾರೆಯೋ ಅದನ್ನೆಲ್ಲ ಕೊಡಿ ಎಂದು ಸೂಚಿಸಿದ್ದೇನೆ.
ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಗೌರವ ಕೊಡುತ್ತೇನೆ . ಇಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ನಮ್ಮ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿ 68 ವರ್ಷಗಳೇ ಆಗಿವೆ. ನಮ್ಮ ತಂದೆ ಕಾಲದಿಂದಲೂ ಸಂಸ್ಥೆ ನಡೆಯುತ್ತಿದೆ. ಸಿದ್ದಾರ್ಥ ಸಂಸ್ಥೆಯಲ್ಲಿ ಕಲಿತು 40,000 ಮಂದಿ ಎಂಜಿನಿಯರ್ ಆಗಿದ್ದಾರೆ. ನಮ್ಮ ಸಂಸ್ಥೆಯ ಮೂಲಕ 10,000 ಮಂದಿ ವೈದ್ಯರಾಗಿದ್ದಾರೆ. ಜಾರಿ ನಿರ್ದೇಶನಾಲಯ ಇಲ್ಲಿಯವರೆಗೆ ಏನೂ ಹೇಳಿಲ್ಲ. ಶಫಿ ಅಹ್ಮದ್ ಅವರ ಶಿಕ್ಷಣ ಸಂಸ್ಥೆಯನ್ನೂ ಖರೀದಿ ಮಾಡಿದ್ದೇವೆ. ಸದ್ಯ ಇಡಿ ವಿಚಾರಣೆ ನಡೆಯುತ್ತಿದೆ, ಈಗ ಹೆಚ್ಚಿನದ್ದೇನನ್ನೂ ವಿವರಿಸಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.